ಸೌಹಾರ್ದಕ್ಕೆ ದಕ್ಕೆ ತರುತ್ತಿರುವ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸದಿರುವುದು ನಾಚಿಕೆಗೇಡು: ಕೆ.ನೀಲಾ

Update: 2023-12-27 11:03 GMT

ಕಲಬುರಗಿ, ಡಿ.27: ಮುಸ್ಲಿಮ್ ಮಹಿಳೆಯರನ್ನು ನಿಂದಿಸುವ ಹಾಗೂ ಸೌಹಾರ್ದಕ್ಕೆ ಭಂಗ ಉಂಟು ಮಾಡುವ ಪ್ರಚೋದನಕಾರಿ ಹೇಳಿಕೆ ನೀಡಿದ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ರನ್ನು ಕೂಡಲೇ ಬಂಧಿಸಿ ಅವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಿಪಿಎಂ ಕಲಬುರಗಿ ಜಿಲ್ಲಾ ಸಮಿತಿ ಇಂದು ನಗರದಲ್ಲಿ ಪ್ರತಿಭಟನೆ ನಡೆಸಿತು.

ಕಳೆದೆರಡು ದಿನಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಸಂಘ ಪರಿವಾರದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲಿಮ್ ಮಹಿಳೆಯರನ್ನು ಅವಹೇಳನಕಾರಿಯಾಗಿ ನಿಂದಿಸಿ ಕೋಮು ಪ್ರಚೋದಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಅವರ ಕೀಳುತನದ ಮಟ್ವವನ್ನು ತೋರ್ಪಡಿಸುತ್ತದೆ ಇದು ಅತ್ಯಂತ ಖಂಡನೀಯ ಎಂದು ಸಿಪಿಎಂ ಜಿಲ್ಲಾ ಕಾರ್ಯಾದರ್ಶಿ ಕೆ.ನೀಲಾ ಆಕ್ರೋಶ ವ್ಯಕ್ತಪಡಿಸಿದರು.

ಇದು ದಕ್ಷಿಣ ಕರ್ನಾಟಕದ ಮತ್ತು ಮೈಸೂರು ಭಾಗದಲ್ಲಿನ ಶಾಂತಿಯ ವಾತಾವರಣವನ್ನು ಕದಡಲು ವಹಿಸುತ್ತಿರುವ ಕೋಮುವಾದಿಗಳ ಸಂಚಿನ ಮುಂದುವರಿಕೆಯ ಭಾಗವಾಗಿದೆ ಎಂಬುದನ್ನು ಎಲ್ಲ ಪ್ರಗತಿಪರರು ಹಾಗೂ ಪ್ರಜಾಪ್ರಭುತ್ವವಾದಿಗಳು ಗಮನಿಸಬೇಕಿದೆ ಎಂದು ಅವರು ತಿಳಿಸಿದರು.

ರಾಜ್ಯದ ಸೌಹಾರ್ದಕ್ಕೆ ಗಂಭೀರ ದಕ್ಕೆ ತರುತ್ತಿರುವ ಮತ್ತು ಅಲ್ಪಸಂಖ್ಯಾತರನ್ನು ಅವಾಚ್ಯವಾಗಿ ನಿಂದಿಸುತ್ತಿರುವ ಇಂತಹ ಪ್ರಕರಣಗಳನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸದಿರುವುದು ನಾಚಿಕೆಗೇಡು ಎಂದು ಕೆ.ನೀಲಾ ಕಳವಳ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಿಪಿಎಂ ರಾಜ್ಯ ಸಮಿತಿಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಪ್ರಕಾಶ, ಎಚ್.ಆರ್.ನವೀನ್ ಕುಮಾರ್, ಟಿ.ಯಶವಂತ, ಬಸವರಾಜ ಪೂಜಾರ, ಮುನಿ ವೆಂಕಟಪ್ಪ, ಎಂ.ಬಿ.ಸಜ್ಜನ, ಭಿಮಶೇಟ್ಟಿ ಯಂಪಳ್ಳಿ, ಗೌರಮ್ಮಾ ಪಿ. ಪಾಟೀಲ್, ಶಾಂತಾ ಎನ್. ಘಂಟೆ, ಸುನೀಲ್ ಕುಮಾರ ಬಜಾಲ್, ಸುರೇಶ ಕಲ್ಲಾಗರ, ಮೀನಾಕ್ಷಿ ಬಾಳಿ, ಸಾಯಬಣ್ಣ ಗುಡುಬಾ, ಬಿ.ಎಂ.ಭಟ್, ಸಿ.ಕುಮಾರಿ, ಪದ್ಮಿನಿ ಕಿರಣಗಿ, ಸಿದ್ದು ಹರವಾಳ, ಶ್ರೀಮಂತ ಬಿರಾದಾರ, ನಾಗಯ್ಯ ಸ್ವಾಮಿ, ಶರಣಬಸಪ್ಪಾ ಮಮಶೆಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.

 

 

 

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News