ರಾಜ್ಯಪಾಲರು ಅನುಮತಿ ಕೊಟ್ಟರೆ ‘ರಾಜಭವನ ಮಾಹಿತಿ ಸೋರಿಕೆ’ ತನಿಖೆ: ಡಾ.ಜಿ.ಪರಮೇಶ್ವರ್

Update: 2024-09-27 14:03 GMT

ಬೆಂಗಳೂರು: ‘ರಾಜಭವನದಿಂದ ಮಾಹಿತಿ ಸೋರಿಕೆಯಾಗುತ್ತಿದ್ದರೆ ಅದಕ್ಕೆ ರಾಜಭವನವೆ ಹೊಣೆ. ಅದಕ್ಕೆ ನಾವು ಜವಾಬ್ದಾರರಲ್ಲ. ರಾಜಭವನದದೊಳಗೆ ಯಾರಿಗೂ ಹೋಗಲು ಸಾಧ್ಯವಾಗುವುದಿಲ್ಲ. ಅತ್ಯುತ್ಕೃಷ್ಟ ಭದ್ರತಾ ವಲಯ ಎಂದು ಪರಿಗಣಿಸಿದ್ದೇವೆ. ಮಾಹಿತಿ ಸೋರಿಕೆ ವಿಚಾರವಾಗಿ ರಾಜ್ಯಪಾಲರು ಅನುಮತಿ ಕೊಟ್ಟರೆ ತನಿಖೆ ಮಾಡುತ್ತೇವೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ರಾಜಭವನದಿಂದ ಮಾಹಿತಿ ಸೋರಿಕೆ ಆರೋಪ ಕುರಿತಾಗಿ ಮಾತನಾಡಿದ ಅವರು, ಬೇರೆಯವರಿಗೆ ರಾಜಭವನದ ಕಾಂಪೌಂಡ್ ಒಳಹೋಗಲು ಆಗುವುದಿಲ್ಲ. ಹಾಗಾಗಿ ಅಲ್ಲಿ ಯಾರೋ ಮಾಹಿತಿ ಸೋರಿಕೆ ಮಾಡುತ್ತಿದ್ದಾರೆ. ಅದನ್ನು ರಾಜ್ಯಪಾಲರು ತನಿಖೆಗೆ ಅನುಮತಿ ಕೊಟ್ಟರೆ ತನಿಖೆ ಮಾಡುತ್ತೇವೆ ಎಂದರು.

ಸಿಎಂ ರಾಜೀನಾಮೆ ಕೇಳಿರುವ ಕೋಳಿವಾಡ ಅವರದ್ದು ವೈಯಕ್ತಿಕ ಅಭಿಪ್ರಾಯವಾಗಿದೆ. ಈಗ ಅವರು ಪಕ್ಷದ ಯಾವುದೇ ಸ್ಥಾನಮಾನದಲ್ಲಿಲ್ಲ. ಈ ಹಿಂದೆ ವಿಧಾನಸಭೆಯ ಅಧ್ಯಕ್ಷರಾಗಿದ್ದರು. ಸದ್ಯಕ್ಕೆ ಅವರು ನೀಡಿರುವ ಅಭಿಪ್ರಾಯ ಪಕ್ಷಕ್ಕೆ ಸಂಬಂಧಪಟ್ಟಿದ್ದಲ್ಲ ಎಂದು ಜಿ.ಪರಮೇಶ್ವರ್ ಹೇಳಿದರು.

ಮುಡಾ ಪ್ರಕರಣದ ಕುರಿತು ತೀರ್ಪು ನೀಡಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಆಡಳಿತ ಮಾಡುವವರು ಸೇರಿದಂತೆ ಎಲ್ಲರೂ ಧರ್ಮ ಹಾಗೂ ನೈತಿಕತೆ ಪಾಲನೆ ಮಾಡಬೇಕು. ಇಲ್ಲವಾದರೆ ರಾವಣ ರಾಜ್ಯ ನಿರ್ಮಾಣವಾಗುತ್ತದೆ. ಕಾನೂನು ಮಾಡುವವರಿಗೆ ಒಂದು ಧರ್ಮ, ನ್ಯಾಯಾಧೀಶರುಗಳಿಗೆ ಒಂದು ಧರ್ಮ ಎಂದು ಇರುವುದಿಲ್ಲ. ಎಲ್ಲರೂ ಧರ್ಮಪಾಲನೆ ಮಾಡಿದಾಗ ರಾಮರಾಜ್ಯವಾಗುತ್ತದೆ ಎಂದು ಜಿ.ಪರಮೇಶ್ವರ್ ತಿಳಿಸಿದರು.

ಸಿಬಿಐ ತನಿಖೆಗೆ ನೀಡಲಾಗಿದ್ದ ಮುಕ್ತ ಅವಕಾಶವನ್ನು ಹಿಂಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಜಿ.ಪರಮೇಶ್ವರ್, ಹೊಸದಿಲ್ಲಿ ಪೊಲೀಸ್ ಕಾಯ್ದೆ ಪ್ರಕಾರ ಸಿಬಿಐಗೆ ತನಿಖೆ ಮಾಡಲು ಅವಕಾಶವಿದೆ. ಅನೇಕ ರಾಜ್ಯ ಸರಕಾರಗಳು ಸಿಬಿಐಗೆ ನೇರವಾಗಿ ಬಂದು ತನಿಖೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಕೆಲವೊಂದೆಡೆ ನಮ್ಮ ಅನುಮತಿ ಬೇಕು ಎಂದು ಹೇಳಿದೆ. ನಮ್ಮ ರಾಜ್ಯದಲ್ಲಿ ಇದು ಮೊದಲ ಬಾರಿಗೆ ಮಾಡಿರುವುದಲ್ಲ. ಇದರ ಬಗ್ಗೆ ಆಶ್ಚರ್ಯಪಡುವ ಅಗತ್ಯ ಇಲ್ಲ. ಈ ಮುಂಚೆಯೂ ನಾಲ್ಕೈದು ಬಾರಿ ನಮ್ಮ ಅನುಮತಿ ಪಡೆದು ತನಿಖೆ ಮಾಡಬೇಕು ಎಂಬ ತೀರ್ಮಾನಗಳು ಆಗಿವೆ ಎಂದರು.

ಅನೇಕ ಸಾರಿ ಸಿಬಿಐ ಬಂದು ರಾಜ್ಯ ಸರಕಾರದ ಗಮನಕ್ಕೆ ಬಾರದೇ, ಯಾವುದೇ ಮಾಹಿತಿ ನೀಡದೇ ತನಿಖೆ ಮಾಡುವುದು ಸರಿ ಇಲ್ಲ. ಹಾಗಾಗಿ ನಾವು ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಇದು ಕೇವಲ ಸಿದ್ದರಾಮಯ್ಯರನ್ನು ಗಮನದಲ್ಲಿಟ್ಟುಕೊಂಡು ಮಾಡಿದ ತೀರ್ಮಾನ ಅಲ್ಲ. ಇದು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೂ ಸಂಬಂಧಿಸಿದೆ ಎಂದು ಜಿ.ಪರಮೇಶ್ವರ್ ಹೇಳಿದರು.

ರಾಜ್ಯಪಾಲರ ಪತ್ರಗಳಿಗೆ ಉತ್ತರ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಜಿ.ಪರಮೇಶ್ವರ್, ಎಲ್ಲ ಪತ್ರಗಳಿಗೂ ಉತ್ತರ ಕೊಡೋಣ. ಆದರೆ, ಸರಕಾರದ ಗಮನಕ್ಕೆ ತಂದು ಉತ್ತರ ನೀಡಬೇಕೆಂದು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಎಲ್ಲವೂ ಸರಕಾರದ ಗಮನಕ್ಕೆ ಇರಬೇಕಾಗುತ್ತದೆ. ತೆರೆಮರೆಯಲ್ಲಿ ಮಾಹಿತಿ ಪಡೆಯುವುದು ಬೇಡ. ಎಲ್ಲರಿಗೂ ತಿಳಿದೇ ಮಾಡಲಿ. ಅರ್ಕಾವತಿ ರೀಡೂ ಸಂಬಂಧವೂ ಕ್ಯಾಬಿನೆಟ್‍ನಲ್ಲಿ ತೀರ್ಮಾನ ಆಗುತ್ತದೆ. ಸರಕಾರ ಅಂದರೆ ಮುಖ್ಯ ಕಾರ್ಯದರ್ಶಿ ಒಬ್ಬರೇ ಅಲ್ಲ. ಅವರು ಒಬ್ಬ ಅಧಿಕಾರಿ ಅಷ್ಟೇ. ಸಂಪುಟವೂ ಇರುತ್ತಲ್ಲ. ಹಾಗಾಗಿ ಈ ನಿರ್ಣಯ ಮಾಡಲಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಕೋರಿ ಬಿಜೆಪಿಯವರು ಪ್ರತಿಭಟನೆ ನಡೆಸುವುದು ಹೊಸತೇನಲ್ಲ. ಆರಂಭದಿಂದಲೂ ಇದನ್ನೇ ಮಾಡುತ್ತಿದ್ದಾರೆ. ಈಗ ವೇಗ ಹೆಚ್ಚಿಸಿರಬಹುದು. ಎಕ್ಸಲೇಟರ್ ಹೆಚ್ಚು ಒತ್ತಿದ್ದಾರೆ ಎನ್ನಿಸುತ್ತದೆ. ವಿರೋಧಪಕ್ಷಗಳಾಗಿ ಹೋರಾಟ ಮಾಡುವುದು ಅವರ ಧರ್ಮ ಎಂದು ಜಿ.ಪರಮೇಶ್ವರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News