ರೈತರ ಕುಂದುಕೊರತೆಗಳನ್ನು ಪರಿಹರಿಸಲು ರಾಕೇಶ್ ಟಿಕಾಯತ್ ಒತ್ತಾಯ

Update: 2023-09-09 15:07 GMT

ಬೆಂಗಳೂರು, ಸೆ.9: ಹಿಂದಿನ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಅತಿವೃಷ್ಟಿಯಾಗಿದ್ದು, ಈ ವರ್ಷದಲ್ಲಿ ಬರಗಾಲ ಬಂದಿದೆ. ಹಾಗಾಗಿ ರಾಜ್ಯದ ರೈತರ ಕುಂದುಕೊರತೆಗಳನ್ನು ಗಂಭೀರವಾಗಿ ಪರಿಗಣಿಸಿ, ಪರಿಹರಿಸಬೇಕು ಎಂದು ರೈತ ಮುಂಖಡ ರಾಕೇಶ್ ಟಿಕಾಯತ್ ಒತ್ತಾಯಿಸಿದ್ದಾರೆ.

ಶನಿವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತೀಯ ರೈತ ಚಳುವಳಿಗಳ ಸಮನ್ವಯ ಸಮಿತಿ ವತಿಯಿಂದ ಎರಡು ದಿನಗಳ ಕಾಲ ಗಾಂಧಿ ಭವನದಲ್ಲಿ ಸಭೆ ನಡೆದಿದೆ. ಸಂಕಷ್ಟದಲ್ಲಿರುವ ರಾಜ್ಯದ ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಆತ್ಮಹತ್ಯೆಯ ನಂತರ ಕೊಡಲಾಗುವ ಪರಿಹಾರದ ಮಾನದಂಡಗಳ ಕುರಿತು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.

ರೈತರ ಆತ್ಮಹತ್ಯೆ ಕುರಿತು ಅಧ್ಯಯನ ನಡೆಸಲು ಸಮಿತಿಯನ್ನು ರಚಿಸಬೇಕು. ಆತ್ಮಹತ್ಯೆಗೆ ಕಾರಣಗಳನ್ನು ಹುಡುಕಿ, ಶಾಶ್ವತ ಪರಿಹಾರಗಳನ್ನು ಹುಡುಕುವ ಜವಬ್ದಾರಿಯನ್ನು ಸಮಿತಿಗೆ ವಹಿಸಬೇಕು ಎಂದು ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ಆಹಾರ ಸರಬರಾಜು ಇಲಾಖೆಯು ಕೊಬ್ಬರಿಯನ್ನು ರೈತರಿಂದ ನೇರ ಖರೀದಿಸಿ ವಿತರಿಸಬೇಕು. ನಿಲ್ಲಿಸಿರುವ ನಫೆಡ್ ಖರೀದಿ ಕೇಂದ್ರ ತಕ್ಷಣ ಪ್ರಾರಂಭಿಸಬೇಕು. ಬೆಂಬಲ ಬೆಲೆಯನ್ನು 5 ಸಾವಿರ ರೂ.ಗೆ ಹೆಚ್ಚಿಸಬೇಕು. ನಫೆಡ್‍ನಲ್ಲಿ ಖರೀದಿಯಾದ ಕೊಬ್ಬರಿಯನ್ನು ಎಣ್ಣೆಮಾಡಿ ಮಾತ್ರವೆ ಮಾರುಕಟ್ಟೆಗೆ ಬಿಡಬೇಕು ಎಂದು ಅವರು ಹೇಳಿದರು.

ಕುಲಾಂತರಿ ಬೆಳೆಗಳ ಪ್ರಯೋಗವನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಹವಮಾನ ವೈಪರಿತ್ಯದಿಂದಾಗಿ ಬೆಳೆಗಳ ಮೇಲೆ ಪರಿಣಾಮ ಬಿರುತ್ತಿರುವ ಕುರಿತು ಹವಮಾನ ವೈಪರಿತ್ಯದ ಮೇಲೊಂದು ವಾಚ್‍ಸೆಲ್ ಪ್ರಾರಂಭಿಸಬೇಕು. ರೈತರ ಸಮಸ್ಯೆಗಳ ಕುರಿತು ರಾಜ್ಯ ಸರಕಾರದ ಜೊತೆ ಸಭೆ ನಡಸಲಾಗಿದ್ದು, ಸರಕಾರ ರೈತರ ಸಮಸ್ಯೆಗಳನ್ನು ಗಂಭಿರವಾಗಿ ಪರಿಗಣಿಸಿ ಪರಿಹಾರ ಒದಗಸಿಕೊಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ರೈತ ಚಳವಳಿಯ ಸಂಸ್ಥಾಪಕ ಸದಸ್ಯ ಪ್ರೊ.ರವಿವರ್ಮಾ ಕುಮಾರ್, ಕೆ.ಟಿ ಗಂಗಾಧರ್, ಪಿ.ಟಿ.ಜಾರ್ಜ್, ಸೆಲ್ವರಾಜ್, ಅನಸೂಯಮ್ಮ ಉಪಸ್ಥಿತರಿದ್ದರು.


 






 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News