ದಲಿತನೆನ್ನುವ ಕಾರಣಕ್ಕೆ ಸಚಿವ ಸ್ಥಾನ ನಿರಾಕರಿಸಿದರೆ?: ಬಿಜೆಪಿ ವಿರುದ್ಧ ಸಂಸದ ರಮೇಶ್ ಜಿಗಜಿಣಗಿ ಅಸಮಾಧಾನ
ವಿಜಯಪುರ: ತಾನು ಏಳು ಬಾರಿ ಸಂಸದನಾಗಿ ಆಯ್ಕೆಯಾಗಿ ಬಂದಿದ್ದರು ತನಗೆ ನರೇಂದ್ರ ಮೋದಿಯವರ 3.0 ಸರಕಾರದ ಕ್ಯಾಬಿನೆಟ್‌ನಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ವಿಜಯಪುರದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ದಲಿತನಾಗಿ ಇಡೀ ದಕ್ಷಿಣ ಭಾರತದಲ್ಲಿ ನಾನೊಬ್ಬನೇ ಏಳು ಬಾರಿ ಸಂಸದನಾಗಿ ಗೆದ್ದು ಬಂದಿರುವುದು. ಕೇಂದ್ರ ಸರಕಾರದಲ್ಲಿ ಈ ಬಾರಿ ಎಲ್ಲ ಮೇಲ್ಜಾತಿಯವರೇ ಸಚಿವರಾಗಿದ್ದಾರೆ. ದಲಿತರು ಬಿಜೆಪಿಗೆ ಮತ ಹಾಕಿಲ್ಲವೇ? ಮನಸ್ಸಿಗೆ ಭಾರೀ ನೋವಾಗಿದೆ. ವೈಯಕ್ತಿವಾಗಿ ತನಗೆ ಕೇಂದ್ರ ಸಚಿವ ಸ್ಥಾನ ಅವಶ್ಯಕತೆ ಇಲ್ಲ. ತನಗೆ ಸಚಿವ ಸ್ಥಾನ ನೀಡಬೇಕೆಂಬುದು ನನ್ನ ಕ್ಷೇತ್ರದ ಜನರ ಒತ್ತಡವಾಗಿದೆ ಎಂದರು.
ಬಿಜೆಪಿ ಪಕ್ಷ ಎನ್ನುವುದು ದಲಿತರ ವಿರೋಧಿ ಎಂದು ಬಹಳಷ್ಟು ನಾಯಕರು ನನ್ನಲ್ಲಿ ವಾದ ಮಾಡಿದ್ದರು. ನನ್ನ ಸಲುವಾಗಿ ಅಲ್ಲ, ಆದರೆ ನಾನು ಮಂತ್ರಿಯಾಗಬೇಕೆಂದು ಜನರ ಒತ್ತಡವಂತೂ ಇದೆ. ಅದನ್ನು ನಾನು ನಿರಾಕರಿಸುವುದಿಲ್ಲ ಎಂದು ಹೇಳುವ ಮೂಲಕ ರಮೇಶ್ ಜಿಗಜಿಣಗಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.