ನನ್ನ ಅಧಿಕಾರವಧಿಯಲ್ಲಿ ಹಕ್ಕುಪತ್ರ ನೀಡಿಯೇ ಸಿದ್ಧ: ಬುಡಕಟ್ಟು ಜನರಿಗೆ ಸಚಿವ ಬಿ.ನಾಗೇಂದ್ರ ಭರವಸೆ

Update: 2023-08-09 16:23 GMT

ಮೈಸೂರು,ಆ.9: ಹಕ್ಕುಪತ್ರಕ್ಕಾಗಿ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿರುವ ಹೆಚ್.ಡಿ.ಕೋಟೆ ಭಾಗದ 3318 ಕುಟುಂಬಗಳಿಗೆ ಹಕ್ಕುಪತ್ರವನ್ನು ನೀಡದಿರುವುದು ಬೇಸರ ಉಂಟಾಗಿದೆ. ನನ್ನ ಅಧಿಕಾರವಧಿಯಲ್ಲಿ ಎಲ್ಲರಿಗೂ ಹಕ್ಕುಪತ್ರ ನೀಡಿಯೇ ಸಿದ್ಧ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ. ನಾಗೇಂದ್ರ ಅವರು ಆದಿವಾಸಿ ಜನರಿಗೆ ಭರವಸೆ ನೀಡಿದರು.

ಎಚ್.ಡಿ.ಕೋಟೆ ತಾಲ್ಲೂಕಿನ ಸೊಳ್ಳೇಪುರ ಗ್ರಾಮದಲ್ಲಿರುವ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಬುಧವಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರಿನ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಬುಡಕಟ್ಟು ದಿನಾಚರಣೆ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಸಹ ಯೋಜನೆಗಳನ್ನು ತಲುಪಿಸುವ ಸಲುವಾಗಿ, ಕಾಡಿನಲ್ಲಿರುವ ಹಾಡಿಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿನ ಸ್ಥಿತಿ ಗತಿ ಅರಿಯಲು ಅಲ್ಲೇ ವಾಸ್ತವ್ಯವನ್ನು ಹೂಡಲು ಆರಂಭಿಸಿದ್ದೇನೆ.

ಆದಿವಾಸಿಗಳಿಗೆ ಆದ ನೋವನ್ನು, ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದೇನೆ, ಇಲ್ಲಿರುವ ಸಮಸ್ಯೆ ಮತ್ತು ನೋವನ್ನು ತೊಡೆದುಹಾಕುವ ನಿಟ್ಟಿನಲ್ಲಿ ನಾನು ಹೋರಾಟ ಮಾಡುತ್ತೇನೆ, ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಯೇ ಒದಗಿಸುತ್ತೇನೆ ಎಂದು ತಿಳಿಸಿದರು.

ಆದಿವಾಸಿಗಳ ಕಷ್ಟ ಕಾರ್ಪಣ್ಯಗಳನ್ನು ಅರಿಯಲಿಕ್ಕಾಗಿಯೇ ನಾನು ಹಾಡಿ ವಾಸ್ತವ್ಯವನ್ನು ಹಮ್ಮಿಕೊಂಡಿದ್ದೇನೆ. ಮುಂದಿನ ವರ್ಷದೊಳಗಾಗಿ ಈ ಎಲ್ಲಾ ಸಮಸ್ಯೆಗಳಿಗೆ ಕೊನೆ ಹಾಡಲಾಗುವುದು ಎಂದು ಆದಿವಾಸಿಗಳಿಗೆ ಭರವಸೆ ನೀಡಿದರು.

ಆದಿವಾಸಿಗಳು ಪ್ರಾಣಿಗಳೊಂದಿಗೆ ನಿತ್ಯ ಸಂಘರ್ಷವನ್ನು ಎದುರಿಸುತ್ತಿದ್ದಾರೆ. ಅದು ಅವರಿಗೆ ಅಭ್ಯಾಸವಾಗಿದೆ. ಆದರೆ ನೀವು ಸರ್ಕಾರವನ್ನು ಬೇಡಿಕೊಳ್ಳುವ ಅಭ್ಯಾಸವಾಗಬಾರದು, ಆದ್ದರಿಂದ ಸರ್ಕಾರವೇ ನಿಮ್ಮ ಬೆನ್ನಹಿಂದೆ ನಿಂತು ಸಮಸ್ಯೆಯನ್ನು ಬಗೆಹರಿಸಲಿದೆ ಎಂದರು.

ಮುಂದಿನ ದಿನಗಳಲ್ಲಿ ಆಶ್ರಮ ಶಾಲೆಯಲ್ಲಿ ಓದಿದ ಮಕ್ಕಳಿಗೆ ಮೊರಾರ್ಜಿ ಶಾಲೆಗೆ ಅಥವಾ ಏಕಲವ್ಯ ಶಾಲೆಗೆ ಸೇರಿಸುವ ಯೋಜನೆಯನ್ನು ಜಾರಿಗೊಳಿಸಲಾಗುವುದು. ಆದಿವಾಸಿಗಳ ಮನೆ ನಿರ್ಮಾಣಕ್ಕೆ 5 ಲಕ್ಷ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಆದಿವಾಸಿಗಳಿಗೆ ಭರವಸೆ ನೀಡಿದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ ಆದಿವಾಸಿಗಳಿಗೆ ನೀಡುತ್ತಿದ್ದ ಆರು ತಿಂಗಳ ಆಹಾರ ಪಡಿತರವನ್ನು ಒಂದು ವರ್ಷಕ್ಕೆ ನೀಡಲು ತೀರ್ಮಾನಿಸಿದ್ದು ನಮ್ಮ ಸರ್ಕಾರದ ಸಚಿವರಾದ ಬಿ. ನಾಗೇಂದ್ರರವರು ಎಂದು ತಿಳಿಸಿದರು.

ಆದಿವಾಸಿಗಳ ಅಭಿವೃದ್ಧಿಗಾಗಿ ಸದನದಲ್ಲಿ ನಾನು ಮಾತನಾಡುತ್ತಿದ್ದೇನೆ, ಆದಿವಾಸಿಗಳ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕೇ ಹೊರತು, ಅವರವರ ಹಿತಾಸಕ್ತಿಗೆ ಜೀವನ ನಡೆಸುವಂತೆ ಕಾಣುತ್ತಿದೆ. ಹೀಗಾದರೆ ಆದಿವಾಸಿಗಳ ಉದ್ಧಾರ ಹೇಗೆ ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದರು.

ಗಿರಿಜನ ಆಶ್ರಮ ಶಾಲೆಗಳನ್ನು 12 ನೇ ತರಗತಿಯವರಗೆ ಮೇಲ್ದರ್ಜೆಗೇರಿಸಿ ಸಕಲ ಸೌಲಭ್ಯ ನೀಡುವಂತೆ ನಾನು ಸಚಿವರಿಗೆ ಒತ್ತಾಯಿಸಿದ್ದೇನೆ. ಆದಿವಾಸಿ ಭವನ ನಿರ್ಮಿಸಲು ಈಗಾಗಲೇ 1 ಕೋಟಿ ವೆಚ್ಚ ತಗುಲಿದ್ದು, ಶೇ. 80ರಷ್ಟು ಕೆಲಸ ಪೂರ್ಣಗೊಂಡಿದ್ದು, ಉಳಿದ ಕೆಲಸ ಪೂರ್ಣಗೊಳಿಸಲು ಅನುದಾನ ಬೇಕಿದೆ ಎಂದು ತಿಳಿಸಿದರು.

ಆದಿವಾಸಿ ಮುಖಂಡ ಕಾಳ ಕಲ್ಕರ್ ಆದಿವಾಸಿಗಳ ಸಮಸ್ಯೆಗಳನ್ನು ಬಿಚ್ಚಿಡುತ್ತಾ ಮಾತನಾಡಿ ತಾಲ್ಲೂಕಿನಲ್ಲಿ ಗಿರಿಜನ ಆಶ್ರಮಶಾಲೆಯನ್ನು ಹೆಸರಿಗಷ್ಟೇ ತೆರೆಯಲಾಗಿದೆ. ಈ ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲ, ಖಾಯಂ ವಾರ್ಡನ್ ಗಳಿಲ್ಲ, ಗುಣಮಟ್ಟದ ಶಿಕ್ಷಣ ಇಲ್ಲದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಹಿನ್ನಲೆ ಈ ಶಾಲೆಗಳನ್ನು ಶಿಕ್ಷಣ ಇಲಾಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಪುನರ್ವಸತಿ ನೆಪವೊಡ್ಡಿ 3318 ಕುಟುಂಬಗಳನ್ನು ಮೂಲಸೌಕರ್ಯವನ್ನು ನೀಡದೇ ಕಾಡಿನಿಂದ ಹೊರಹಾಕಿದ್ದು ಉತ್ತಮ ಸೌಕರ್ಯವಿಲ್ಲದೇ ಪರದಾಡುವ ಸ್ಥಿತಿ ಎದುರಾಗಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಸಹ ಒತ್ತಾಯಿಸಿದರು.

ಜಿಲ್ಲಾ ಸಮನ್ವಯಾಧಿಕಾರಿ ಮುನಿ ರಾಜೇಂದ್ರ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಕಲ್ಲೇಶ್, ವಾಲ್ಮೀಕಿ ನಿಗಮದ ಪದ್ಮನಾಭ, ಜಂಟಿ ನಿರ್ದೇಶಕ ರಾಜಕುಮಾರ್, ನಾಗರಹೊಳೆ ಅಭಯಾರಣ್ಯದ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸ್.ಸಿ. ಎಸ್.ಟಿ ಅಭಿವೃದ್ದಿ ಇಲಾಖೆಯ ಸುರೇಶ್, ತಾಲ್ಲೂಕು ದಂಡಾಧಿಕಾರಿ ಸಣ್ಣರಾಮಪ್ಪ, ಚಕ್ಕೋಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷ ರಾಜೇಗೌಡ, ಬೇಗೂರು ಗ್ರಾ.ಪಂ. ಅಧ್ಯಕ್ಷ ಶೈಲೇಂದ್ರ, ಮೈಮುಲ್ ನಿರ್ದೇಶಕ ಈರೇಗೌಡ, ಪರಶಿವಮೂರ್ತಿ, ಎಚ್.ಸಿ. ನರಸಿಂಹಮೂರ್ತಿ, ವಿಜಯಕುಮಾರ್, ಇಓ ಧರಣೇಶ್, ವೆಂಕಟೇಶ್ ಪ್ರಸಾದ್ ಇದ್ದರು.

ಹಾಡಿಯಲ್ಲೇ ವಿಶ್ವಬುಡಕಟ್ಟು ದಿನಾಚರಣೆ ಆಚರಿಸಿದ ಸಚಿವರು

 ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ವಿಶ್ವಬುಡಕಟ್ಟು ದಿನಾಚರಣೆಯನ್ನ ಆಚರಿಸುವುದು ಸಂಪ್ರದಾಯ ಅದರೆ ಯುವ ಸಬಲೀಕರಣ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವರಾದ ಬಿ.ನಾಗೆಂದ್ರ ಅವರು ಅದಿವಾಸಿಗಳು ವಾಸಿಸುವ ರಾಜ್ಯದ ಕಟ್ಟಕಡೆಯ ಹೆಗ್ಗಡದೇವನಕೋಟೆ ತಾಲೂಕಿನ ಸಿ.ಹಾಡಿಯ ಏಕಲ್ಯವ್ಯ ವಸತಿ ಶಾಲೆಯಲ್ಲಿ ಬುಡಕಟ್ಟು ಜನರೊಂದಿಗೆ ವಿಶ್ವಬುಡಕಟ್ಟು ದಿನಾಚೆಣೆಯನ್ನ ಅರ್ಥಪೂರ್ಣವಾಗಿ ಆಚರಿಸಿದರು.



Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News