ರೇಣುಕಾಸ್ವಾಮಿ ಕೊಲೆ | ಎಸ್‌ಪಿಪಿ ಬದಲಾವಣೆಯ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ: ಜಿ.ಪರಮೇಶ್ವರ್
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸರಕಾರಿ ಅಭಿಯೋಜಕರ(ಎಸ್‌ಪಿಪಿ) ಬದಲಾವಣೆಯ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದರು.
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸಲಹೆಗಾರರು ಏನೆಲ್ಲ ಸಲಹೆಗಳನ್ನು ನೀಡುತ್ತಾರೋ ಅದರ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಕಾನೂನು ಬಿಟ್ಟು ಯಾರು ಕೆಲಸ ಮಾಡಲಾಗುವುದಿಲ್ಲ. ಕಾನೂನು ಪ್ರಕಾರವೇ ಸರಕಾರಿ ಅಭಿಯೋಜಕರು ಕೆಲಸ ಮಾಡಬೇಕು. ಯಾರನ್ನೇ ನೇಮಿಸಿದರೂ ಸಹ ಕಾನೂನು ಪುಸ್ತಕ ಒಂದೇ ಅಲ್ಲವೇ? ಅದರ ಪ್ರಕಾರವೇ ಕೆಲಸ ಮಾಡಬೇಕಾಗುತ್ತದೆ ಎಂದರು.
ಎಸ್‌ಪಿಪಿ ಬದಲಾವಣೆಯ ಪ್ರಸ್ತಾವನೆ ಸರಕಾರದ ಮುಂದೆ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ಬದಲಾವಣೆ ಮಾಡಿದರೂ ಸಹ ಅದರಲ್ಲೇನು ತಪ್ಪಿಲ್ಲ. ಕಾರಣ ಇಟ್ಟುಕೊಂಡೇ ತೀರ್ಮಾನ ತೆಗೆದುಕೊಳ್ಳಲಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಸಡಿಲ ಮಾಡುವಂತಹ ಯಾವುದೇ ಉದ್ದೇಶ ಸರಕಾಕ್ಕಿಲ್ಲ. ಮುಲಾಜಿಲ್ಲದೇ, ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೇ ಪ್ರಕರಣದ ತನಿಖೆ ನಡೆಯುತ್ತಿದೆ. ಸರಕಾರಿ ಅಭಿಯೋಜಕರನ್ನು ಬದಲಾಯಿಸುವ ಸಂದರ್ಭ ಬಂದರೆ ಕಾರಣ ಇರುತ್ತದೆ. ಇಲ್ಲದೇ ಮಾಡುವುದಿಲ್ಲ ಎಂದು ಹೇಳಿದರು.
ನಟ ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ನಾಪತ್ತೆ ಪ್ರಕರಣವನ್ನು ಪೊಲೀಸರು ಪರಿಶೀಲನೆ ಮಾಡುತ್ತಾರೆ. ಈ ಪ್ರಕರಣವನ್ನು ತನಿಖೆ ಮಾಡಬೇಕಾಗುತ್ತದೆ ಅನ್ನಿಸಿದರೆ ತೀರ್ಮಾನ ಮಾಡುತ್ತಾರೆ. ಸರಕಾರದ ಅನುಮತಿ ಬೇಕಾದರೆ ನೀಡಲಾಗುವುದು ಎಂದು ತಿಳಿಸಿದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿಯವರು ರಸ್ತೆ ತಡೆ, ಸಿಎಂ ಅವರಿಗೆ ಘೇರಾವ್ ಹಾಕಲು ನಿರ್ಧರಿಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಇದಕ್ಕೆ ಏನೇನು ಕ್ರಮ ಕೈಗೊಳ್ಳಬೇಕು ತೆಗೆದುಕೊಳ್ಳುತ್ತೇವೆ. ರಸ್ತೆ ತಡೆ ನಡೆಸಲು ಕೆಲವು ಸಲ ಪೊಲೀಸರು ಅರ್ಧ ಗಂಟೆ ಅನುಮತಿ ಕೊಡುತ್ತಾರೆ. ಆ ರೀತಿ ಅನುಮತಿ ಕೊಟ್ಟಿದ್ದರೆ ಸಮಂಜಸವಾಗಿರುತ್ತದೆ. ರಸ್ತೆ ತಡೆ ನಡೆಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅದರ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ" ಎಂದರು.