ಸಾಗರ: ಭಾರೀ ಮಳೆಗೆ ಜೈಲಿನ ಹೊರ ಗೋಡೆ ಕುಸಿತ

Update: 2023-07-23 17:12 GMT

ಶಿವಮೊಗ್ಗ: ಸತತವಾಗಿ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಸಾಗರ ನಗರದ ಎಸ್‌ಆರ್‌ಎಸ್ ಮಿಲ್ ರಸ್ತೆಯಲ್ಲಿರುವ ಜೈಲಿನ ಹೊರಭಾಗದ ಗೋಡೆ ಎರಡು ಬಾರಿ ಕುಸಿದಿರುವ ಘಟನೆ ನಡೆದಿದೆ.

ಮಳೆಯ ಆರ್ಭಟಕ್ಕೆ ಭಾನುವಾರ ಬೆಳಗ್ಗೆ 11 ರ ಸುಮಾರಿಗೆ 30 ಅಡಿಯಷ್ಟು ಗೋಡೆ ಕುಸಿದಿದ್ದರೆ, ಮತ್ತೊಮ್ಮೆ ರಾತ್ರಿ 8 ಗಂಟೆಯ ವೇಳೆಗೆ 15 ಅಡಿ ಅಗಲದಷ್ಟು ಜಾಗದ ಧರೆಗೆ ಉರುಳಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ತೊಂದರೆಗಳಾಗಿಲ್ಲ ಎಂದು ತಿಳಿದು ಬಂದಿದೆ.

ರಾತ್ರಿ ವೇಳೆಗೆ ಗೋಡೆ ಹೊರಭಾಗಕ್ಕೆ ಕುಸಿದಿದ್ದರಿಂದ ಎಸ್‌ಆರ್‌ಎಸ್ ಮಿಲ್ ರಸ್ತೆಯು ಭಾಗಶಃ ಮುಚ್ಚಿದ್ದು ಸಂಚಾರ ಸ್ಥಗಿತಗೊಳಿಸಲಾಗಿದೆ. ಜೈಲಿನ ಗೋಡೆಗೆ ತಾಗಿಕೊಂಡಂತೆ ರಸ್ತೆ ಪಕ್ಕದಲ್ಲಿದ್ದ ಟ್ರಾನ್ಸ್‌ಫಾರ್ಮರ್‌ಗೆ ಯಾವುದೇ ಧಕ್ಕೆಯಾಗಿಲ್ಲ . ರವಿವಾರವಾಗಿದ್ದರಿಂದ ರಸ್ತೆಯಲ್ಲಿ ಹೆಚ್ಚಿನ ವಾಹನ ಸಂಚಾರ ಇರಲಿಲ್ಲ. ಸುಮಾರು 15 ಅಡಿ ಎತ್ತರದ ಗೋಡೆ ಇದಾಗಿದ್ದು, ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಈ ನಡುವೆ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಜೈಲು ಅಧೀಕ್ಷಕಿ ಡಾ. ಅನಿತಾ ಪರಿಶೀಲನೆ ನಡೆಸಿದ ನಂತರ ವರದಿಗಾರರೊಂದಿಗೆ ಮಾತನಾಡಿ, ಪುರಾತನವಾದ ಜೈಲಿನ ಹೊರಗೋಡೆ ಕುಸಿದಿದೆ. ಬ್ಯಾರಕ್‌ಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲದಿರುವುದರಿಂದ ಜೈಲಿನ ಒಳಾಂಗಣದಲ್ಲಿರುವ ಖೈದಿಗಳ ನಿರ್ವಹಣೆಗೆ ಇದರಿಂದ ಸಮಸ್ಯೆಯಾಗಿಲ್ಲ. ಇಲ್ಲಿನ ದುರಸ್ತಿ ಕೆಲಸಗಳ ಕುರಿತಾಗಿ ತಕ್ಷಣ ಲೋಕೋಪಯೋಗಿ ಇಲಾಖೆಗೆ ವರದಿ ನೀಡಿ ಕ್ರಮಕ್ಕೆ ಮುಂದಾಗುತ್ತೇವೆ. ಇದೇ ರೀತಿ ಮಳೆ ಮುಂದುವರೆದರೆ ಸುರಕ್ಷತೆಯ ದೃಷ್ಟಿಯಿಂದ ಇಲ್ಲಿನ ಖೈದಿಗಳನ್ನು ಶಿವಮೊಗ್ಗಕ್ಕೆ ವರ್ಗಾಯಿಸುವ ಸಂಬಂಧ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.

ಲೋಕೋಪಯೋಗಿ ಅಧಿಕಾರಿಗಳು ಕಟ್ಟಡದ ಸುರಕ್ಷತಾ ವರದಿಯನ್ನು ಸೋಮವಾರ ನೀಡಲಿದ್ದು, ಅದರಲ್ಲಿನ ವರದಿ ಗಮನಿಸಿ ಜೈಲಿನ ಹೊರ ಗೋಡೆ ದುರಸ್ತಿ ಕಾರ್ಯ ನಡೆಸಬೇಕಿದೆ. ಸದ್ಯ ಸಾಗರದ ಜೈಲಿನಲ್ಲಿ 25 ಖೈದಿಗಳಿದ್ದು, ಅವರೆಲ್ಲರನ್ನೂ ಶಿವಮೊಗ್ಗಕ್ಕೆ ಸ್ಥಳಾಂತರಿಸಲು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News