ಸರೋದ್ ವಾದಕ ಪಂಡಿತ್ ರಾಜೀವ್‌ ತಾರಾನಾಥ್ ನಿಧನ

Update: 2024-06-11 18:28 GMT

ಪಂಡಿತ್ ರಾಜೀವ್ ತಾರಾನಾಥ್ (Photo credit: deccanherald.com) 

ಮೈಸೂರು: ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರು ಮೈಸೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.

ಕುವೆಂಪುನಗರದ ಪಂಚಮಂತ್ರ ರಸ್ತೆಯಲ್ಲಿರುವ ನಿವಾಸದಲ್ಲಿ, ಕುಸಿದು ಬಿದ್ದು ಅವರ ತೊಡೆ ಮೂಳೆ ಮುರಿದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.

ಕುವೆಂಪುನಗರದ ನಿವಾಸದಲ್ಲಿ ಬುಧವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಗಂಟೆವರೆಗೆ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಸಂಗೀತ ಲೋಕದ ಧ್ರುವತಾರೆಗಳಲ್ಲೊಬ್ಬರಾದ ರಾಜೀವ್ ತಾರಾನಾಥ್ ಅಕ್ಟೋಬರ್ 17, 1932 ರಂದು ಜನಿಸಿದರು. ವಿಶ್ವದ ಶ್ರೇಷ್ಠ ಸರೋದ್ ವಾದಕರಲ್ಲಿ ಒಬ್ಬರೆನಿಸಿರುವ ರಾಜೀವ್ ತಾರಾನಾಥರು ಅತ್ಯಂತ ಸರಳತೆ ಮತ್ತು ಶ್ರೇಷ್ಠ ಸಂಗೀತಕ್ಕೆ ಹೆಸರಾದವರು. ಮೂಲತಃ ಕರ್ನಾಟಕದವರೇ ಆದ ರಾಜೀವ್ ಅವರ ಸಂಗೀತಕ್ಕೆ ಮನಸೋಲದವರೇ ಇಲ್ಲ. ಒಂಬತ್ತು ವರ್ಷದವರಾಗಿದ್ದಾಗಲೇ ತಮ್ಮ ಮೊದಲ ಸಾರ್ವಜನಿಕ ಗಾಯನ ಪ್ರದರ್ಶನವನ್ನು ನೀಡಿದ್ದ ರಾಜೀವ್ ತಾರಾನಾಥ್, ತಮ್ಮ ಇಪ್ಪತ್ತು ವರ್ಷದ ಮೊದಲು ಆಕಾಶವಾಣಿಗೆ ಹಾಡುತ್ತಿದ್ದರು.

1980ರ ದಶಕದಲ್ಲಿ ಆಡೆನ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಬೋಧನೆ ಮಾಡುತ್ತಿದ್ದರು. 1995ರಿಂದ 2005 ರವರೆಗೆ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್‌ನ ವಿಶ್ವ ಸಂಗೀತ ವಿಭಾಗದಲ್ಲಿ ಭಾರತೀಯ ಸಂಗೀತ ಕಾರ್ಯಕ್ರಮದ ಮುಖ್ಯಸ್ಥರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ತಾರಾನಾಥರು ಹಲವು ಪ್ರಖ್ಯಾತ ಚಲನಚಿತ್ರಗಳಿಗೂ ಸಂಗೀತ ನೀಡಿದ್ದರು. ಕನ್ನಡದ ಸಂಸ್ಕಾರ, ಪಲ್ಲವಿ, ಅನುರೂಪ, ಶೃಂಗಾರ ಮಾಸ, ಪೇಪರ್ ಬೋಟ್, ಮಲಯಾಳಂನ ಕಾಂಚನ ಸೀತಾ ಮತ್ತು ಕಟವ್ ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದ್ದರು.

ಪ್ರಶಸ್ತಿಗಳು: ತಾರಾನಾಥರ ಸಂಗೀತ ಸೇವೆಗೆ ಹಲವು ಪ್ರಶಸ್ತಿಗಳು ಸಂದಿವೆ. 1993ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರಿ ಪ್ರಶಸ್ತಿ, 1996ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1998ರಲ್ಲಿ ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, 2000ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2018ರಲ್ಲಿ ಹಂಪಿ ವಿವಿಯ ನಾಡೋಜ ಪ್ರಶಸ್ತಿ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ, 2019ರಲ್ಲಿ ಪದ್ಮಶ್ರೀ, ಮುರುಘಾ ಮಠದ ಬಸವಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ರಾಜೀವ್ ತಾರಾನಾಥ್ ನಿಧನಕ್ಕೆ ಸಿಎಂ ಸಂತಾಪ:

ಜಗತ್ ಪ್ರಸಿದ್ಧ ಸರೋದ್ ವಾದಕ, ಕರ್ನಾಟಕದ ಹೆಮ್ಮೆಯ ಸುಪುತ್ರ ಪಂಡಿತ್ ರಾಜೀವ್ ತಾರಾನಾಥ್ ಅವರ ನಿಧನದಿಂದ ದುಃಖಿತನಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ರಾಜೀವ್ ತಾರಾನಾಥರ ಅಗಲಿಕೆ ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ಸಂಗೀತಲೋಕಕ್ಕೆ ತುಂಬಲಾರದ ನಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜೀವ್ ತಾರಾನಾಥ್ ಖ್ಯಾತ ಸಂಗೀತ ಕಲಾವಿದರು ಮಾತ್ರ ಆಗಿರಲಿಲ್ಲ, ಅದನ್ನು ಮೀರಿ ಶ್ರೇಷ್ಠ ಮಾನವತಾವಾದಿಯಾಗಿದ್ದರು. ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News