ಶಾಲೆ ಸಮಯ ಬದಲಾವಣೆ: ಮತ್ತೆ ಕಾಲಾವಕಾಶ ನೀಡಿದ ಹೈಕೋರ್ಟ್

Update: 2023-10-11 18:48 GMT

ಬೆಂಗಳೂರು, ಅ.11: ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಉಂಟಾಗುತ್ತಿರುವ ಸಂಚಾರದ ದಟ್ಟಣೆ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಶಾಲೆ, ಕೈಗಾರಿಕೆ, ವಾಣಿಜ್ಯ ಮತ್ತು ಕಂಪೆನಿಗಳ ಕೆಲಸದ ಅವಧಿ ಬದಲಾವಣೆ ಮಾಡುವ ಸಾಧ್ಯತೆಯ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸಮಗ್ರವಾದ ವರದಿ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ ಮತ್ತೆ ಎಂಟು ವಾರಗಳ ಕಾಲಾವಕಾಶ ನೀಡಿದೆ.

ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಬಳ್ಳಾರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಬಸವೇಶ್ವರ ವೃತ್ತದಿಂದ ಹೆಬ್ಬಾಳದ ಎಸ್ಟೀಮ್ ಮಾಲ್ ವರೆಗೆ ರಸ್ತೆ ಅಗಲೀಕರಣ ಮಾಡಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಮರ್ಪಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಸರಕಾರಕ್ಕೆ ಕಾಲಾವಕಾಶ ನೀಡಿದೆ.

ಅರ್ಜಿಯನ್ನು ಸೆ.12 ವಿಚಾರಣೆ ನಡೆಸಿದ್ದ ನ್ಯಾಯಾಲಯ, ಬೆಂಗಳೂರು ನಗರದಲ್ಲಿ ನಿತ್ಯ ಉಂಟಾಗುತ್ತಿರುವ ಸಂಚಾರದ ದಟ್ಟಣೆ ಸಮಸ್ಯೆ ನಿವಾರಿಸಬೇಕಿದೆ. ಈ ನಿಟ್ಟಿನಲ್ಲಿ ಶಾಲೆಗಳ ಕೆಲಸದ ಅವಧಿಯನ್ನು ಬದಲಾವಣೆ ಮಾಡುವ ಕುರಿತಂತೆ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮೂಲಕ ಖಾಸಗಿ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ ಬಸ್ ಆಪರೇಟರ್‍ಗಳು, ಪಾಲಕರ ಸಂಘಗಳು ಪ್ರತಿನಿಧಿಗಳ ಜತೆಗೆ ಸಭೆ ಕರೆದು ಸಮಾಲೋಚಿಸಿ ಆರು ವಾರಗಳಲ್ಲಿ ವರದಿ ಸಲ್ಲಿಸುವಂತೆ ಸರಕಾರಕ್ಕೆ ನಿರ್ದೇಶಿಸಿತ್ತು. 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News