ಶಾಲೆ ಸಮಯ ಬದಲಾಗದು: ಹೈಕೋರ್ಟ್‍ಗೆ ವರದಿ ಸಲ್ಲಿಸಿದ ಸರಕಾರ
ಬೆಂಗಳೂರು: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ಶಾಲಾ-ಕಾಲೇಜು ಮತ್ತು ಕಾರ್ಖಾನೆಗಳ ಸಮಯ ಬದಲಾವಣೆ ಮಾಡುವ ಕುರಿತು ಹೈಕೋರ್ಟ್ ಸಲಹೆ ನೀಡಿತ್ತು. ಇದಕ್ಕೆ ಬಂಧಿಸಿದಂತೆ ರಾಜ್ಯ ಸರಕಾರ ಶಾಲಾ ಸಮಯ ಬದಲಾವಣೆ ಮಾಡಲು ಆಗುವುದಿಲ್ಲ ಎಂದು ಹೈಕೋರ್ಟ್‍ಗೆ ವರದಿ ನೀಡಿದೆ.
ಬಳ್ಳಾರಿ ರಸ್ತೆ ವಿಸ್ತರಣೆ ಕುರಿತಂತೆ ಸಮರ್ಪಣಾ ಸಾಂಸ್ಕೃತಿಕ ಮತ್ತು ಸಮಾಜ ಸೇವಾ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ವಿಚಾರಣೆ ನಡೆಸಿತು.
ಬೆಂಗಳೂರು ನಗರದ ವಾಹನದಟ್ಟಣೆಯು ಕೇವಲ ಶಾಲಾ ಸಮಯದ ಕಾರಣದಿಂದ ಆಗಿರುವುದಿಲ್ಲ.ಸಂಚಾರದಟ್ಟಣೆಯ ಒಟ್ಟಾರೆ ವಾಹನಗಳ ಬಳಕೆ ವಿವಿಧ ಕಚೇರಿಗಳು, ಕೈಗಾರಿಕೆಗಳು ಮತ್ತು ಇತರೆ ಸ್ಥಳಗಳಿಗೆ ತೆರಳುವ ವಾಹನಗಳಿಂದ ಉಂಟಾಗುತ್ತದೆ ಎಂದು ಸರಕಾರ ಹೈಕೋರ್ಟ್‍ಗೆ ತಿಳಿಸಿದೆ.
ವಾಹನದಟ್ಟಣೆಯನ್ನು ತಪ್ಪಿಸಲು ಶಾಲೆಗಳನ್ನು ಬೇಗನೆ ಆರಂಭಿಸಿದಲ್ಲಿ ಮಕ್ಕಳಿಗೆ ನಿದ್ರೆ, ಊಟ, ಉಪಚಾರ ನಿಗದಿತ ವೇಳೆಯಲ್ಲಿ ಆಗದೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಹೀಗಾಗಿ, ಹಲವು ಆಯಾಮಗಳಲ್ಲಿ ನೋಡುವುದಾದಲ್ಲಿ ಶಾಲಾ ಸಮಯದಲ್ಲಿ ಯಾವುದೇ ಬದಲಾವಣೆ ಅಗತ್ಯವಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಅಲ್ಲದೆ, ಹೈಕೋರ್ಟ್ ಸೂಚನೆಯಂತೆ ಸಂಬಂಧಿಸಿದವರ ಜೊತೆ ಸಭೆ ನಡೆಸಿರುವ ರಾಜ್ಯ ಸರಕಾರ, ಶಾಲಾ ಸಮಯ ಬದಲಾವಣೆ ಮಾಡಲು ಆಗುವುದಿಲ್ಲ ಎಂದು ಹೈಕೋರ್ಟ್‍ಗೆ ವರದಿ ನೀಡಿದೆ.
ಮುಂದುವರೆದು, ಹಲವು ಕ್ರಮಗಳನ್ನು ಕೈಗೊಳ್ಳಬಹುದು ಎಂದಿರುವ ಸರಕಾರ, ಈ ಕೆಳಗಿನ ಅಂಶಗಳನ್ನು ಹೈಕೋರ್ಟ್ ಮುಂದಿಟ್ಟಿದೆ.
ಶಾಲಾ ಆವರಣದ ಒಳಗೆ ನಿಲುಗಡೆಗೆ ಅವಕಾಶ ಒದಗಿಸಲು ಸಾಧ್ಯವಿರದೆ ಇರುವ ಶಾಲೆಗಳ ಸಮೀಪದಲ್ಲಿ ನಿರ್ದಿಷ್ಟ ಪಿಕ್‍ಅಪ್ ಮತ್ತು ಡ್ರಾಪ್ ಪಾಯಿಂಟ್‍ಗಳನ್ನು ಗುರುತಿಸುವುದು.
ಶಾಲೆಗಳ ಸಮೀಪ ಶಾಲಾರಂಭ ಮತ್ತು ಮುಕ್ತಾಯದ ಸಮಯದಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮತ್ತು ಸ್ವಇಚ್ಛೆಯುಳ್ಳ ಪಾಲಕರನ್ನು ಟ್ರಾಫಿಕ್ ವಾರ್ಡನ್‍ಗಳನ್ನಾಗಿ ನಿಯೋಜಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುವುದು.
ಹೆಚ್ಚಿನ ವಾಹನ ದಟ್ಟಣೆ ಉಂಟಾಗುವ ಶಾಲೆಗಳ ಸುತ್ತಮುತ್ತ ಲೋಕಲ್ ಏರಿಯಾ ಟ್ರಾಫಿಕ್ ಮ್ಯಾನೇಜ್ಮೆಂಟ್ ಪ್ಲ್ಯಾನ್ ಜಾರಿ ಮಾಡುವುದು. ಪಾಲಕರು ಮಕ್ಕಳನ್ನು ಶಾಲೆಗೆ ತಲುಪಿಸಲು ಮತ್ತು ಕರೆತರಲು ಸ್ವಂತ ವಾಹನ ಬಳಸುವುದನ್ನು ತಪ್ಪಿಸಲು 3-4 ಶಾಲೆಗಳಿಗೆ ಒಟ್ಟುಗೂಡಿ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಬಿಎಂಟಿಸಿಯಿಂದ ಬಸ್ ಸೇವೆ ನೀಡುವುದು.