ಲೈಂಗಿಕ ಹಗರಣ | ವಿದೇಶದಲ್ಲಿದ್ದುಕೊಂಡೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಪ್ರಜ್ವಲ್‌ ರೇವಣ್ಣ

Update: 2024-05-27 11:45 GMT

ಬೆಂಗಳೂರು : ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ಕೊನೆಗೂ ಪ್ರತ್ಯಕ್ಷರಾಗಿದ್ದು, ವಿದೇಶದಲ್ಲಿದ್ದುಕೊಂಡೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ಇದೇ ಮೇ.31ಕ್ಕೆ ಎಸ್ಐಟಿ ತನಿಖೆಗೆ ಬರುವುದಾಗಿ ಖುದ್ದು ಅವರು ವಿಡಿಯೋದಲ್ಲಿ ಹೇಳಿದ್ದಾರೆ. 

ಇಡೀ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಒಂದು ತಿಂಗಳ ಬಳಿಕ ಪ್ರತ್ಯಕ್ಷವಾಗಿ ಇಂದು ದಿಢೀರ್ ವಿಡಿಯೋ ಬಿಡುಗಡೆ ಮಾಡಿರುವ ಅವರು, "ತಂದೆ, ತಾಯಿ ಹಾಗೂ ತಾತನ ಬಳಿ ನಾನು ಕ್ಷಮೆ ಕೇಳುತ್ತೇನೆ. ನಮ್ಮ ಕುಮಾರಣ್ಣ, ನಾಡಿನ ಜನತೆ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಕ್ಷಮೆ ಕೇಳುತ್ತೇನೆ" ಎಂದಿದ್ದಾರೆ.

ʼನಾನು ವಿದೇಶ ಲ್ಲಿ ಎಲ್ಲಿದ್ದೇನೆ ಎಂದು ಮಾಹಿತಿ ಕೊಡದಿರುವುದಕ್ಕೆ ಖಂಡಿತವಾಗಿಯೂ ಕ್ಷಮೆ ಕೇಳುತ್ತೇನೆ. ನಾನು ಮತದಾನ ಮಾಡಿ ವಿದೇಶಕ್ಕೆ ಹೋಗುವ ದಿನ ನನ್ನ ಮೇಲೆ ಯಾವುದೇ ಪ್ರಕರಣವೂ ದಾಖಲಾಗಿರಲಿಲ್ಲ. ಎಸ್‌ಐಟಿ ಕೂಡ ರಚನೆ ಆಗಿರಲಿಲ್ಲ. ಏ.26ರಂದು ನಾನು ವಿದೇಶಕ್ಕೆ ಹೋಗುವುದು ಕೂಡ ಪೂರ್ವ ನಿರ್ಧರಿತವಾಗಿರುತ್ತದೆ. ವಿದೇಶದಲ್ಲಿ ಉಳಿದುಕೊಂಡು ಮೂರ್ನಾಲ್ಕು ದಿನದ ಬಳಿಕ ಯೂಟ್ಯೂಬ್‌ನಲ್ಲಿ ನ್ಯೂಸ್ ಚಾನೆಲ್ ನೋಡುವ ವೇಳೆ ಈ ಮಾಹಿತಿ ನನಗೆ ತಿಳಿದು ಬಂದಿತು. ಇದಾದ ನಂತರ ಎಸ್‌ಐಟಿ ಕೂಡ ನನಗೆ ನೋಟಿಸ್ ಕೊಡುವ ಕೆಲಸ ಮಾಡಿತು. ಎಸ್‌ ಐ ಟಿ ನೋಟಿಸ್‌ಗೆ ಎಕ್ಸ್‌ ಖಾತೆ ಮತ್ತು ನಮ್ಮ ಲಾಯರ್ ಮೂಲಕ ವಿಚಾರಣೆಗೆ ಹಾಜರಾಜಲು 7 ದಿನಗಳ ಕಾಲಾವಕಾಶ ಕೇಳಿದ್ದೆನುʼ ಎಂದು ತಿಳಿಸಿದ್ದಾರೆ.

ʼಈ ಏಳು ದಿನ ಸಮಯಾವಕಾಶ ಕೇಳಿದ ನಂತರ ಕಾಂಗ್ರೆಸ್ ಹಿರಿಯ ನಾಯಕರಾದ ರಾಹುಲ್ ಗಾಂಧಿ ಸೇರಿದಂತೆ ಅನೇಕರು ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಾತನಾಡುವುದನ್ನು ನಾನು ನೋಡಿದೆ. ಇದೆಲ್ಲವನ್ನು ನೋಡಿ ನಾನು ಡಿಪ್ರೆಶನ್‌ಗೆ ಒಳಗಾಗಿ, ಒಂದೆಡೆ ಐಸೋಲೇಷನ್‌ಗೆ ಒಳಗಾಗಿದ್ದೆ. ಇದರಿಂದಾಗಿ ನಿಮ್ಮೆಲ್ಲರ ಮುಂದೆ ನಾನು ಕ್ಷಮೆ ಕೇಳುತ್ತೇನೆʼ 

"ನಂತರ ಹಾಸನದಲ್ಲಿ ಎಲ್ಲ ನನ್ನ ವಿರುದ್ಧದ ಶಕ್ತಿಗಳು ಒಟ್ಟುಗೂಡಿಕೊಂಡು ಪಿತೂರಿ ಮಾಡುವ ಕೆಲಸವನ್ನು ಮಾಡಿದ್ದಾರೆ. ರಾಜಕೀಯವಾಗಿ ನಾನೇನು ಬೆಳೆಯುತ್ತಿದ್ದೇನೆ, ಅದನ್ನು ಮುಗಿಸಬೇಕು ಎಂಬ ನಿಟ್ಟಿನಲ್ಲಿ ನನ್ನನ್ನು ಏನೇನೋ ಪ್ರಕರಣಗಳಲ್ಲಿ ಸಿಲುಕಿಸುವ ಕೆಲಸ ಮಾಡಿದ್ದಾರೆ. ಇದರಿಂದ ನಾನು ಮತ್ತಷ್ಟು ಆಘಾತಕ್ಕೆ ಒಳಗಾಗಿದ್ದೇನೆ" ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

"ಈ ಘಟನೆಯಿಂದ ಯಾರೂ ಕೂಡ ಅನ್ಯಥಾ ಭಾವಿಸುವುದು ಬೇಡ. ನಾನೇ ಸ್ವತಃ ಶುಕ್ರವಾರ ಮೇ 31ರಂದು ಎಸ್‌ ಐಟಿ ಮುಂದೆ ಬಂದು ಸಂಪೂರ್ಣವಾಗಿ ಪ್ರಕರಣದ ತನಿಖೆಯಲ್ಲಿ ಭಾಗಿಯಾಗುತ್ತೇನೆ. ನನಗೆ ನ್ಯಾಯಾಲಯದ ಮೇಲೆ ನಂಬಿಕೆಯಿದೆ. ನನ್ನ ಮೇಲೆ ದಾಖಲಾಗಿರುವಂತಹ ಸುಳ್ಳು ಪ್ರಕರಣಗಳಿಂದ ಮುಕ್ತವಾಗಿ ಹೊರಗೆ ಬರುವ ವಿಶ್ವಾಸವಿದೆ. ನನ್ನ ಮೇಲೆ ದೇವರು, ಜನರು ಹಾಗೂ ಕುಟುಂಬದ ಆಶೀರ್ವಾದ ಇರಲಿ ಎಂದು ಬೇಡಿಕೊಳ್ಳುತ್ತೇನೆ. ನಾನು ಮೇ 31ರಂದು ಬಂದು ಈ ಎಲ್ಲ ಪ್ರಹಸನಗಳಿಗೆ ತೆರೆ ಎಳೆಯುತ್ತೇನೆ" ಎಂದು ವಿದೇಶದಲ್ಲಿ ಕುಳಿತು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News