ಅಕ್ರಮವಾಗಿ ಕೆರೆ ಮಣ್ಣು ತೆಗದವರಿಗೆ ಶಿವಮೊಗ್ಗ ಡಿಸಿ ರಕ್ಷಣೆ: ಕಾಂಗ್ರೆಸ್ ಮುಖಂಡ ಜಗದೀಶ್ ಆರೋಪ

Update: 2023-08-14 17:31 GMT

ಶಿವಮೊಗ್ಗ(ಆ.14): ಅಬ್ಬಲಗೆರೆ ಗ್ರಾಮದ ಮುದ್ದಣ್ಣನ ಕೆರೆಯಲ್ಲಿ ಅಕ್ರಮವಾಗಿ ಕೆರೆ ಹೂಳು ತೆಗೆದು ಸರ್ಕಾರದ ಬೊಕ್ಕಸಕ್ಕೆ 71.45 ಲಕ್ಷ ರೂ. ನಷ್ಟ ಉಂಟು ಮಾಡಿದವರನ್ನು ಜಿಲ್ಲಾಧಿಕಾರಿಗಳು ರಕ್ಷಣೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಿ. ಜಗದೀಶ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅಧ್ಯಕ್ಷರಾಗಿರುವ ಶಿವಮೊಗ್ಗದ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವೇ ಈ ಕೃತ್ಯದಲ್ಲಿ ಭಾಗಿಯಾಗಿದೆ ಎಂದು ದೂರಿದರು.

ಅಕ್ರಮವಾಗಿ ಹೂಳು ಸಾಗಿಸಿರುವ ಕುರಿತು ಜಿ.ಪಂನ ಕಾರ್ಯಪಾಲಕ ಇಂಜಿನಿಯರ್ ಅವರು ತನಿಖಾ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದರೂ ಸಹ ಈ ಪ್ರಕರಣವನ್ನು ಜಿಲ್ಲಾಧಿಕಾರಿಗಳು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಕೆರೆಯಲ್ಲಿ ಕಾನೂನುಬಾಹಿರವಾಗಿ ಸುಮಾರು 15ರಿಂದ 20 ಅಡಿ ಆಳದಲ್ಲಿ ಮಣ್ಣನ್ನು ತೆಗೆದು ಖಾಸಗಿ ಲೇಔಟ್‌ಗಳಿಗೆ ಸಾಗಿಸಲಾಗಿದೆ. ರೂ.5 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿರುವ ಶಂಕೆ ಇದೆ. ಕೇವಲ 500 ಲೋಡಿಗೆ ಅನುಮತಿ ಪಡೆದು ಅಕ್ರಮವಾಗಿ ಸುಮಾರು 15 ಸಾವಿರಕ್ಕೂ ಹೆಚ್ಚು ಲೋಡ್ ಫಲವತ್ತಾದ ಮಣ್ಣನ್ನು ಸಾಗಿಸಲಾಗಿದೆ ಎಂದು ದೂರಿದರು.

ಕೆರೆಯ ಫಲವತ್ತಾದ ಹೂಳನ್ನು ತೆಗೆದು ರೈತರ ತೋಟ ಹಾಗೂ ಜಮೀನುಗಳಿಗೆ ಸಾಗಿಸಲು ಅವಕಾಶವಿದೆ.ಆದರೆ ಖಾಸಗಿ ಲೇಔಟ್‌ಗಳಿಗೆ ಸಾಗಿಸಿರುವುದು ಕಾನೂನುಬಾಹಿರವಾಗಿದೆ. ಕೆರೆಯಲ್ಲಿ ಹೂಳು ತೆಗೆಯಲು ಮೂಲ ಇಲಾಖೆ ಅನುಮತಿ ಪಡೆಯಬೇಕು. ಕೆರೆಗಳಿಂದ ಮೂರು ಅಡಿಗಳಿಗಿಂತ ಆಳದಲ್ಲಿ ಹೆಚ್ಚು ಹೂಳು ತೆಗೆಯಲು ನಿರ್ಬಂಧ ವಿಧಿಸಿರುವ ಕುರಿತು ಶಿವಮೊಗ್ಗ ತಾಪಂ ಇಒ, ಪಿಡಿಒಗಳಿಗೆ ಪತ್ರ ಬರೆದಿದ್ದರು. ಆದರೂ ಅಬ್ಬಲಗೆರೆ ಗ್ರಾಪಂ. ಪಿಡಿಒ ಹಿರಿಯ ಅಧಿಕಾರಿಗಳ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ಹಿರಿಯ ಭೂ ವಿಜ್ಞಾನಿಗಳು ಕೆರೆಯಿಂದ ತೆಗೆದ ಮಣ್ಣಿಗೆ ಕೇವಲ 40 ಸಾವಿರ ರೂ. ರಾಜಧನ ನಿಗದಿ ಮಾಡಿ ಕೆರೆಯಲ್ಲಿ ಮರಳು ಇದೆ ಎಂದು ಭಾವಿಸಿ 16ಸಾವಿರ ರಾಜಧನ ವಸೂಲಿ ಮಾಡಿದ್ದಾರೆ. ಕೆರೆ ಅಂಗಳದಲ್ಲಿ 1,82,688 ರೂ ಮೌಲ್ಯದ ಮಣ್ಣು ತೆಗೆಯಲಾಗಿದೆ.ಇದರ ರಾಜಧನದ ಮೌಲ್ಯ 72,01,920 ರೂ ಆಗಿದೆ.ಆದರೆ ಕೇವಲ 56 ಸಾವಿರ ಮಾತ್ರ ಪಾವತಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ಅಗಾಧ ನಷ್ಟ ಉಂಟುಮಾಡಿದೆ. ಈ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಪಂಚಾಯತ್‌ರಾಜ್ ಇಂಜಿನಿಯರ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅವರಿಗೆ ಆದೇಶ ನೀಡಿದ್ದರೂ ಸಹ ಈ ಬಗ್ಗೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಅಕ್ರಮ ಮಣ್ಣಿಗೆ ಅಷ್ಟೂ ರಾಜಧನವನ್ನು ವಸೂಲಿ ಮಾಡಬೇಕು ಹಾಗೂ ಈ ಅಕ್ರಮಕ್ಕೆ ಸಾಥ್ ನೀಡಿದ ಎಲ್ಲಾ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಹಗರಣವನ್ನು ಜಿಲ್ಲಾಧಿಕಾರಿಗಳು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದು, ಒಂದುವೇಳೆ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಅಲ್ಲದೆ ಸರ್ಕಾರ ಸಿಒಡಿ ತನಿಖೆ ನಡೆಸಲು ಆಗ್ರಹಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮದ ಮುಖಂಡರಾದ ಚಂದ್ರಶೇಖರ್ ಗೌಡ, ಎಸ್. ಪ್ರಕಾಶ್, ಜಯಣ್ಣ, ಗಿರೀಶ್ ಭಾಗವಹಿಸಿದ್ದರು

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News