ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ 'ಸರ್ವರಿಗೂ ಪ್ರವೇಶ' ಫಲಕ ಕಡ್ಡಾಯ: ಸಚಿವ ರಾಮಲಿಂಗಾರೆಡ್ಡಿ

Update: 2023-06-24 15:01 GMT

ಬೆಂಗಳೂರು, ಜೂ. 24: ‘ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಯಾವುದೇ ಜಾತಿ, ಲಿಂಗ ಬೇಧವಿಲ್ಲದೆ ಸರ್ವರಿಗೂ ಪ್ರವೇಶ ಕಲ್ಪಿಸಲಾಗಿದೆ ಎನ್ನುವ ಫಲಕವನ್ನು ಕಡ್ಡಾಯವಾಗಿ ಅಳವಡಿಸಲಾಗುವುದು’ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಬಸವನಗುಡಿಯ ದೊಡ್ಡಗಣಪತಿ ದೇವಾಲಯದಲ್ಲಿ ಧರ್ಮಾದಾಯ ದತ್ತಿ ಇಲಾಖೆ ಅಡಿಯಲ್ಲಿ ಬರುವ ದೇಗುಲಗಳಲ್ಲಿ ಹಿರಿಯ ನಾಗರಿಕರಿಗೆ ನೇರ ಪ್ರವೇಶ ಕಲ್ಪಿಸಿರುವ ವ್ಯವಸ್ಥೆಗೆ ಅಧಿಕೃತ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಹಿರಿಯ ನಾಗರಿಕರು ಅವರ ವಯಸ್ಸಿನ ದಾಖಲೆ, ಆಧಾರ್ ಕಾರ್ಡ್ ತೋರಿಸಿದರೆ ಶೀಘ್ರ ದರ್ಶನವಕ್ಕೆ ಅನುಕೂಲವಾಗುವಂತೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ದೇವಾಲಯಗಳಲ್ಲಿ ಸ್ಥಳಾವಕಾಶ ಇದ್ದಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸ್ಥಳ ಕಾಯ್ದಿರಿಸಬೇಕು ಎಂದು ಹೇಳಿದರು.

ದೇವಾಲಯಗಳಲ್ಲಿ ಹಿರಿಯ ನಾಗರಿಕರ ಸಹಾಯ ಕೇಂದ್ರವನ್ನು ಸ್ಥಾಪಿಸಿ ಹಿರಿಯ ನಾಗರಿಕರಿಗೆ ಸಹಕರಿಸಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು. ಸಹಾಯ ಕೇಂದ್ರಕ್ಕೆ ಜವಾಬ್ದಾರಿಯುತ ಸಿಬ್ಬಂದಿಯನ್ನು ನಿಯೋಜಿಸಿ ಹಿರಿಯ ನಾಗರಿಕರಿಗೆ ತ್ವರಿತ ದರ್ಶನ ಏರ್ಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದೂ ಅವರು ಉಲ್ಲೇಖಿಸಿದರು.

ಸುತ್ತೋಲೆ: ರಾಜ್ಯ ಸರಕಾರವು ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ ನೀಡಿದ್ದು, ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳಪಡುವ ‘ಎ’ ಮತ್ತು ‘ಬಿ’ ವರ್ಗದ ದೇವಾಲಯಗಳಲ್ಲಿ 65ವರ್ಷ ಮೇಲ್ಪಟ್ಟವರಿಗೆ ನೇರವಾಗಿ ದೇವರ ದರ್ಶನ ಸೌಲಭ್ಯ ಒದಗಿಸುವ ಬಗ್ಗೆ ಸುತ್ತೋಲೆ ಹೊರಡಿಸಿತ್ತು. ಈ ದೇವಾಲಯಗಳಲ್ಲಿ 65 ವರ್ಷ ಮೇಲ್ಪಟ್ಟ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತುಕೊಳ್ಳುವುದಕ್ಕೆ ವಿನಾಯಿತಿ ಕಲ್ಪಿಸಿದೆ.

ಕುಕ್ಕೆ ಸುಬ್ರಹ್ಮಣ್ಯ, ನಿಮಿಷಾಂಬ, ಸವದತ್ತಿ ರೇಣುಕಾ ಯಲ್ಲಮ್ಮ, ದೊಡ್ಡಗಣಪತಿ, ಕದ್ರಿ, ಕಟೀಲು, ಬಿಳಿಗಿರಿರಂಗನಾಥ ಸ್ವಾಮಿ ಸೇರಿದಂತೆ 200ಕ್ಕೂ ಹೆಚ್ಚು ದೇವಾಲಯಗಳು ‘ಎ’ ವರ್ಗದ ದೇವಾಲಯಗಳ ಪಟ್ಟಿಗೆ ಬರಲಿವೆ. ಅದೆ ರೀತಿ, ಧರ್ಮರಾಯಸ್ವಾಮಿ, ಗವಿ ಗಂಗಾಧರೇಶ್ವರ, ಕೋಲಾರಮ್ಮ ಸೇರಿದಂತೆ 100ಕ್ಕೂ ಹೆಚ್ಚು ‘ಬಿ’ ವರ್ಗದ ದೇವಾಲಯಗಳ ಪಟ್ಟಿಗೆ ಬರಲಿವೆ. ಇಂತಹ ದೇವಾಲಯಗಳಲ್ಲಿ ಹಿರಿಯ ನಾಗರಿಕರು ನೇರವಾಗಿ ದೇವರ ದರ್ಶನ ಪಡೆದುಕೊಳ್ಳಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News