ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣ: ಮಾಜಿ ಸಚಿವ ಬಿ. ನಾಗೇಂದ್ರರನ್ನು ವಿಚಾರಣೆ ನಡೆಸಿದ ಎಸ್‌ಐಟಿ

Update: 2024-07-09 15:56 GMT

ಬಿ.ನಾಗೇಂದ್ರ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಮಂಗಳವಾರ ವಿಚಾರಣೆ ನಡೆಸಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಎಂಬವರು ಡೆತ್‍ನೋಟ್ ಬರೆದಿಟ್ಟು ಮೇ26ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣದಲ್ಲಿ ನಾಗೇಂದ್ರ ಹೆಸರು ಕೇಳಿಬಂದಿದ್ದರಿಂದ ಜೂ.6ರಂದು ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಪರಿಶಿಷ್ಟ ಪಂಗಡಗಳ ಕಲ್ಯಾಣ ಖಾತೆ ಹೊಂದಿದ್ದ ಬಿ.ನಾಗೇಂದ್ರ ಅವರನ್ನು ಐದು ಗಂಟೆಗೂ ಹೆಚ್ಚು ಕಾಲ ಎಸ್‌ಐಟಿ ಅಧಿಕಾರಿಗಳು ಮಂಗಳವಾರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ಬಸನಗೌಡ ದದ್ದಲ್ ಅವರು ಸಹ ವಿಚಾರಣೆಗೆ ಹಾಜರಾಗಿದ್ದರು.

ಸರಕಾರಿ ಸ್ವಾಮ್ಯದ ನಿಗಮಕ್ಕೆ ಸೇರಿದ 187 ಕೋಟಿ ರೂ.ಗಳನ್ನು ಅದರ ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಚಂದ್ರಶೇಖರನ್ ಆರೋಪಿಸಿದ್ದರು. ಇದಲ್ಲದೆ, ಕೆಲವು ಐಟಿ ಕಂಪೆನಿಗಳು ಮತ್ತು ಹೈದರಾಬಾದ್ ಮೂಲದ ಸಹಕಾರಿ ಬ್ಯಾಂಕ್‍ನ ವಿವಿಧ ಖಾತೆಗಳಿಗೆ 88.62 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಜಮಾ ಮಾಡಲಾಗಿತ್ತು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ದೂರಿನ ಆಧಾರದ ಮೇಲೆ ರಾಜ್ಯ ಸರಕಾರವು ಈ ಪ್ರಕರಣ ಸಂಪೂರ್ಣ ತನಿಖೆಗಾಗಿ ಎಸ್‍ಐಟಿಯನ್ನು ರಚಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News