ರಾಜ್ಯ ಬಜೆಟ್ 2024 : ಬಿಜೆಪಿ ನಾಯಕರ ಸಭಾತ್ಯಾಗ
ಬೆಂಗಳೂರು: ‘ಏನಿಲ್ಲ..ಏನಿಲ್ಲ..’ ಎಂಬ ಹಾಡಿನ ಸಾಲನ್ನು ಉಲ್ಲೇಖಿಸಿ ಘೋಷಣೆ ಕೂಗಿದ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2024-25ನೆ ಸಾಲಿನ ಬಜೆಟ್ ವಿರೋಧಿಸಿ, ಸಭಾತ್ಯಾಗ ಮಾಡಿದ ಪ್ರಸಂಗ ವಿಧಾಸನಭೆಯಲ್ಲಿ ನಡೆಯಿತು.
ಶುಕ್ರವಾರ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಬಜೆಟ್ ಮಂಡನೆ ಆರಂಭಿಸುತ್ತಿದ್ದಂತೆ ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್ ಸೇರಿದಂತೆ ಇನ್ನಿತರ ಸದಸ್ಯರು ‘ಏನಿಲ್ಲ..ಏನಿಲ್ಲ..ಎಲ್ಲ ಸುಳ್ಳು’ ಎಂದು ಘೋಷಣೆ ಕೂಗಿದರು. ಅಲ್ಲದೆ, ಇದೇ ಸಂದರ್ಭದಲ್ಲಿ ಕೆಲಕಾಲ ಭಿತ್ತಿ ಪತ್ರ ಪ್ರದರ್ಶಿಸಿ ನಂತರ ಸಭಾತ್ಯಾಗ ಮಾಡಿದರು. ಜೆಡಿಎಸ್ ಸದಸ್ಯರು, ಬಿಜೆಪಿ ಸದಸ್ಯರನ್ನು ಬೆಂಬಲಿಸಿ ಹೊರ ನಡೆದರು.
ಇದಕ್ಕೆ ಆಕ್ಷೇಪಿಸಿದ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಟೀಕಿಸಲು ಮುಂದಾದರು. ಆಗ ಬಜೆಟ್ ಮಂಡಿಸುತ್ತಿದ್ದ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಸದಸ್ಯರಿಗೆ ನಿಶಬ್ಧವಾಗಿರಲು ಸೂಚಿಸಿದರು. 15ನೆ ಹಣಕಾಸು ಆಯೋಗದ ಮಧ್ಯಂತರ ವರದಿ ಶಿಫಾರಸ್ಸಿನಂತೆ ಕರ್ನಾಟಕ ರಾಜ್ಯಕ್ಕೆ ಆದ ಅನ್ಯಾಯ ಸರಿಪಡಿಸುವಲ್ಲಿ ಹಿಂದಿನ ಸರಕಾರ ವಿಫಲವಾಯಿತು ಎಂದು ಸಿದ್ದರಾಮಯ್ಯ ಟೀಕಿಸಿದರು.
ಪ್ರತಿಭಟನೆ: ಪ್ರತಿಪಕ್ಷ ನಾಯಕ ಆರ್.ಅಶೋಕ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ವಿಧಾನಸೌಧ-ವಿಕಾಸಸೌಧ ನಡುವಿನ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಬಜೆಟ್ ವಿರೋಧಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸುಳ್ಳು ರಾಮಯ್ಯನ ಬೋಗಸ್ ಬಜೆಟ್, ಹಾದಿ ತಪ್ಪಿದ ಹಣಕಾಸು ಸ್ಥಿತಿ-ಹಳಿ ತಪ್ಪಿದ ಬಜೆಟ್, ಏನಿಲ್ಲ ಏನಿಲ್ಲ ಬಜೆಟ್‍ನಲ್ಲಿ ಏನಿಲ್ಲ, ಹೇಳುವುದೆಲ್ಲ ನಿಜವಲ್ಲ’ ಎಂಬುದು ಸೇರಿದಂತೆ ವಿವಿಧ ಘೋಷಣೆಗಳನ್ನು ಕೂಗಿದ ಸದಸ್ಯರು, ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಹಿಂದಕ್ಕೆ ಕೊಂಡ್ಯೊಯುವ ಬಜೆಟ್: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ರೈತವಿರೋಧಿ, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಶೂನ್ಯ ಪ್ರಗತಿಯ ಬಜೆಟ್ ಇದು. ರಾಜ್ಯವನ್ನು 20ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗುವ ಬಜೆಟ್ ಇದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.
ಯುವಕರಿಗೆ ಯಾವುದೇ ಒಂದು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಘೋಷಣೆ ಮಾಡಿಲ್ಲ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮತ್ತು ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳಲು ಇವತ್ತು ಸನ್ಮಾನ್ಯ ಸಿದ್ದರಾಮಯ್ಯನವರು ತಮ್ಮ ಸಮಯ ವ್ಯರ್ಥ ಮಾಡಿದ್ದಾರೆ. ಈ ಬಜೆಟ್‍ನ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದಾರೆ ಎಂದು ಅವರು ಆಕ್ಷೇಪಿಸಿದರು.
ಮೊನ್ನೆ ದಿಲ್ಲಿ ಚಲೋ ಮಾಡಿದ್ದರು. ದಿಲ್ಲಿಯಲ್ಲಿ ರಾಜ್ಯ ಸರಕಾರದ ಗೌರವವನ್ನು ಹರಾಜು ಹಾಕುವ ಕೆಲಸ ಆಗಿತ್ತು. ಇವತ್ತು ಮುಖ್ಯಮಂತ್ರಿ ತಮ್ಮ ಬಜೆಟ್‍ನಲ್ಲಿ ಕೇಂದ್ರ ಸರಕಾರವನ್ನು ದೂರುವ ಕೆಲಸ ಮಾಡಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ 1 ರೂಪಾಯಿಯನ್ನೂ ಕೊಡದ ಬಜೆಟ್ ಇದಾಗಿದೆ ಎಂದು ಅವರು ಟೀಕಿಸಿದರು.
‘15ನೆ ದಾಖಲೆಯ ಬಜೆಟ್ ಮಂಡಿಸುತ್ತಿರುವ ಒಬ್ಬ ಅನುಭವಿ ಮುಖ್ಯಮಂತ್ರಿ ಈ ರೀತಿ ಬಜೆಟ್ ಮಂಡಿಸಬಹುದೆಂದು ನಿರೀಕ್ಷೆ ಮಾಡಿರಲಿಲ್ಲ. ನಿಜವಾಗಲೂ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಒಂದು ದುರಂತವೇ ಸರಿ. ರೈತರನ್ನೂ, ಮಹಿಳೆಯರನ್ನೂ, ನೇಕಾರರನ್ನೂ, ಯುವಕರನ್ನೂ ಕಡೆಗಣಿಸಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿಯನ್ನೂ ಕಡೆಗಣಿಸಿದ ಸರಕಾರ ಬಹುಶಃ ರಾಜ್ಯದ ಜನರ ಪಾಲಿಗೆ ಬದುಕಿದ್ದೂ ಸತ್ತಂತೆ’
ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ
‘ಐದು ಗ್ಯಾರಂಟಿಗಳ ಯಥಾಸ್ಥಿತಿ ವಾದಕ್ಕೆ ಸಿಂಹಪಾಲು ಹಣ ನೀಡಿ, ರಸ್ತೆ, ನೀರಾವರಿ, ಆರೋಗ್ಯ, ಶಿಕ್ಷಣ ಕ್ಷೇತ್ರದ ಬಗ್ಗೆ ಕಳಕಳಿ ಇಲ್ಲದ ‘ಟುಸ್ ಪಟಾಕಿ’ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದಾರೆ. ಸಂಪನ್ಮೂಲ ಕ್ರೋಢೀಕರಣಕ್ಕೆ ಒದ್ದಾಡಿರುವುದು ಈ ಬಜೆಟ್‍ನಲ್ಲಿ ವ್ಯಕ್ತವಾಗುತ್ತಿದೆ. ಕೇಂದ್ರ ಸರಕಾರ ದೂಷಿಸಲೆಂದೆ ಬಜೆಟ್ ಮಂಡಿಸಲಾಗಿದೆ’
ಟಿ.ಎ.ಶರವಣ ಪರಿಷತ್ ಜೆಡಿಎಸ್ ಉಪನಾಯಕ