ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಪುನೀತ್ ರಾಜ್‌ಕುಮಾರ್ ಹೆಸರಿಡಲು ರಾಜ್ಯ ಸರಕಾರ ಸೂಚನೆ
ಬೆಂಗಳೂರು, ನ.17: ಶುದ್ದ ಕುಡಿಯುವ ನೀರಿನ ಘಟಕಗಳಿಗೆ ನಟ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡುವ ಸಂಬಂಧ ಸೂಕ್ತ ಕೈಗೊಳ್ಳುವಂತೆ ಬಿಬಿಎಂಪಿಗೆ ರಾಜ್ಯ ಸರಕಾರ ಸೂಚನೆ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾವಿರಾರು ಕುಡಿಯುವ ನೀರಿನ ಘಟಕಗಳ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ರವರ ಸವಿನೆನಪಿನಲ್ಲಿ ಪುನೀತ್ ರಾಜ್ ಕುಮಾರ್ ಶುದ್ದ ಕುಡಿಯುವ ನೀರಿನ ಘಟಕ ಎಂದು ಈ ಯೋಜನೆಗೆ ನಾಮಕರಣ ಮಾಡಬೇಕು ಎಂದು ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಅಮರೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು.
ಸಾವಿರಾರು ಮಕ್ಕಳಿಗೆ ಉಚಿತ ವಸತಿ ಶಿಕ್ಷಣ ಸೇರಿ ಹಲವಾರು ಸಾಮಾಜಿಕ ಮುಖಿ ಕಾರ್ಯಗಳು ಮಾಡಿದ್ದಾರೆ. ಡಾ.ಪುನೀತ್ ರಾಜ್ ಕುಮಾರ್ ಅವರ ಜೀವನ ಆದರ್ಶಗಳು ನಮಗೆ ದಾರಿದೀಪವಾಗಿದೆ. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ ಎಂಬ ಉದ್ದೇಶದಿಂದ ಶುದ್ದ ಕುಡಿಯುವ ನೀರಿನ ಘಟಕದ ಯೋಜನೆಗೆ ಮತ್ತು ಘಟಕಗಳ ಮೇಲೆ ಡಾ.ಪುನೀತ್ ರಾಜ್ ಕುಮಾರ್ ಶುದ್ದ ಕುಡಿಯುವ ನೀರಿನ ಘಟಕ ಎಂದು ನಾಮಕರಣ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿತ್ತು.
ಇದನ್ನು ಪರಿಗಣಿಸಿರುವ ರಾಜ್ಯ ಸರಕಾರ, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ಈ ಸಂಬಂಧ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಯೂ ಪತ್ರವೊಂದನ್ನು ಉಲ್ಲೇಖಿಸಿದ್ದಾರೆ.