ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆ ಆರಂಭ

Update: 2024-03-25 05:26 GMT

ಮಂಗಳೂರಿನ ಪರೀಕ್ಷಾ ಕೇಂದ್ರವೊಂದರಲ್ಲಿ ಮಾ.25ರಂದು ಬೆಳಗ್ಗೆ ಅಂತಿಮ ಸಿದ್ಧತೆಯಲ್ಲಿ ತೊಡಗಿರುವ ವಿದ್ಯಾರ್ಥಿನಿಯರು.

ಬೆಂಗಳೂರು, ಮಾ.25: ರಾಜ್ಯಾದ್ಯಂತ ಪ್ರಸಕ್ತ (2023-24ನೇ) ಸಾಲಿನ ಎಸೆಸೆಲ್ಸಿ ಪರೀಕ್ಷೆ ಇಂದು ಆರಂಭಗೊಂಡಿದ್ದು, 2,750 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ.

ಇಂದು ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ ಇಂಗ್ಲಿಷ್(ಎನ್ಸಿಇಆರ್ಟಿ) ಮತ್ತು ಸಂಸ್ಕೃತ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾರಂಭಿಸಿದ್ದಾರೆ.

ಶುಭ ಹಾರೈಸಿದ ಡಿಸಿಎಂ:

"ಶೈಕ್ಷಣಿಕ ಜೀವನದ ಅತ್ಯಂತ ಮಹತ್ವದ ಘಟ್ಟವಾದ SSLC ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು. ಯಾವುದೇ ಭಯ, ಆತಂಕ ಅಥವಾ ಉದ್ವೇಗಕ್ಕೆ ಒಳಗಾಗದೆ ಪರೀಕ್ಷೆ ಬರೆಯಿರಿ. ಉಜ್ವಲ ಭವಿಷ್ಯ ನಿಮ್ಮದಾಗಲಿ" ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.


8,69,968 ವಿದ್ಯಾರ್ಥಿಗಳು ನೋಂದಣಿ

ಪರೀಕ್ಷೆಗೆ ಒಟ್ಟು 8,69,968 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 8,10,368 ಶಾಲಾ ವಿದ್ಯಾರ್ಥಿಗಳು ಹಾಗೂ 18,225 ಖಾಸಗಿ ವಿದ್ಯಾರ್ಥಿಗಳಾಗಿದ್ದಾರೆ. 41,375 ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ. ಅದರಲ್ಲೂ 4,41,910 ಬಾಲಕರು ಮತ್ತು 4,28,058 ಬಾಲಕಿಯರಾಗಿದ್ದಾರೆ. 5,424 ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಅಧಿಕಾರಿ, ಸಿಬ್ಬಂದಿ ಹಾಗೂ ಪರೀಕ್ಷಾರ್ಥಿಗಳಿಗೆ ಕಡ್ಡಾಯವಾಗಿ ಮೊಬೈಲ್ ಫೋನ್ ನಿಷೇಧಿಸಲಾಗಿದೆ. ಕೇಂದ್ರಗಳ ಸುತ್ತಾಮುತ್ತಾ 200ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಸಿಸಿಟಿವಿ ಕ್ಯಾಮರಾ ಮೂಲಕ ಪರೀಕ್ಷಾ ಅವ್ಯವಹಾರಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ.

ಮಾ.27ರಂದು ಸಮಾಜ ವಿಜ್ಞಾನ ಪರೀಕ್ಷೆ, ಮಾ.30ರಂದು ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ ಪರೀಕ್ಷೆ ನಡೆಯಲಿದೆ. ಅದೇರೀತಿ ಎ.2ರಂದು ಗಣಿತ, ಸಮಾಜ ಶಾಸ್ತ್ರ ಪರೀಕ್ಷೆ, ಎ.3ರಂದು ಅರ್ಥಶಾಸ್ತ್ರ ಪರೀಕ್ಷೆ, ಮಾ.4ರಂದು ತೃತೀಯ ಭಾಷೆ ಹಿಂದಿ, ಹಿಂದಿ(ಎನ್ಸಿಇಆರ್ಟಿ), ಕನ್ನಡ, ಇಂಗ್ಲೀಷ್ ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ ಮತ್ತು ತುಳು ಪರೀಕ್ಷೆಗಳು ನಡೆಯಲಿವೆ. ಎ.6ರಂದು ದ್ವಿತೀಯ ಭಾಷೆ ಇಂಗ್ಲಿಷ್ ಮತ್ತು ಕನ್ನಡ ಪರೀಕ್ಷೆಗಳು ನಡೆಯಲಿವೆ.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News