ಜಿಪಿಎ ರದ್ದು ಮಾಡುವ ಅಧಿಕಾರ ಸಬ್ ರಿಜಿಸ್ಟ್ರಾರ್ ಗೆ ಇಲ್ಲ: ಹೈಕೋರ್ಟ್

Update: 2023-11-05 14:41 GMT

ಬೆಂಗಳೂರು, ನ. 5: ನೋಂದಾಯಿತ ಜನರಲ್ ಪವರ್ ಆಫ್ ಅಟಾರ್ನಿ(ಜಿಪಿಎ) ಅನ್ನು ಕ್ಯಾನ್ಸಲೇಷನ್ ಆಫ್ ಜಿಎಪಿ ಹೆಸರಿನಲ್ಲಿ ರದ್ದುಗೊಳಿಸಿ ಮತ್ತೊಂದು ಹೆಸರಿನಲ್ಲಿ ನೋಂದಣಿ ಮಾಡುವ ಅಧಿಕಾರ ಉಪ ನೋಂದಣಾಧಿಕಾರಿಗಳಿಗೆ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.

ಬಾಗಲಕೋಟೆಯ ಮಧುಮತಿ ತಮ್ಮ ಹಾಗೂ ತಮ್ಮ ಪತಿಯ ಹೆಸರಿನಲ್ಲಿ ಜಂಟಿಯಾಗಿ ನೋಂದಾಯಿಸಿದ್ದ ಜಿಪಿಎ ಅನ್ನು ರದ್ದುಗೊಳಿಸಲು ಬಯಸಿದ್ದರು. ಆದರೆ, ಅದನ್ನು ನಿರಾಕರಿಸಿ ಬೆಳಗಾವಿಯ ಸಬ್ ರಿಜಿಸ್ಟ್ರಾರ್ ಹಿಂಬರಹ ನೀಡಿದ್ದರು. ಇದನ್ನು ಪ್ರಶ್ನಿಸಿ ಮಧುಮತಿ ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ.

ರಿಜಿಸ್ಟ್ರಾರ್/ಸಬ್ ರಿಜಿಸ್ಟ್ರಾರ್ ಗೆ ಅಗತ್ಯ ಪುರಾವೆಗಳೊಂದಿಗೆ ದಾಖಲೆಗಳ ನೋಂದಣಿ ಮಾಡುವುದಿಲ್ಲವೆಂದು ಹೇಳುವ ಯಾವ ಅಧಿಕಾರವೂ ಇಲ್ಲ. ಆದರೆ, 1908ರ ರಿಜಿಸ್ಟ್ರೇಷನ್ ಕಾಯಿದೆ ಅನ್ವಯ ರಿಜಿಸ್ಟ್ರಾರ್‍ಗೆ ನೋಂದಾಯಿತ ದಾಖಲೆಯನ್ನು ರದ್ದುಗೊಳಿಸುವ ಅಧಿಕಾರ ಇಲ್ಲ ಎಂದು ಪೀಠ ತಿಳಿಸಿದೆ.

ಕ್ರಯಪತ್ರ ಅಥವಾ ಡೀಡ್ ಅನ್ನು ರದ್ದುಗೊಳಿಸುವುದು ಅದನ್ನು ವಜಾ ಮಾಡುವುದಕ್ಕೆ ಸಮನಾದುದು. ಒಪ್ಪಂದದ ವಿಚಾರಗಳಲ್ಲಿ, ವಜಾ ಮಾಡುವುದು(ರಿಷಿಷನ್) ಪದವನ್ನು ರದ್ದು ಮಾಡುವುದಕ್ಕೆ ಬಳಸಲಾಗುವುದು. ಹೀಗಾಗಿ, ಒಮ್ಮೆ ವ್ಯಕ್ತಿ ದಾಖಲೆಯನ್ನು ನೋಂದಾಯಿಸಿದರೆ ಮತ್ತು ನಂತರ ಅದನ್ನು ರದ್ದುಗೊಳಿಸಲು ಬಯಸಿದರೆ ಆಗ ಆ ಪ್ರಕರಣವನ್ನು ಭಾರತೀಯ ಒಪ್ಪಂದ ಕಾಯಿದೆ ಸೆಕ್ಷನ್ 62ರಡಿ ಪರಿಗಣಿಸಬೇಕಾಗುತ್ತದೆ ಎಂದು ಪೀಠ ಹೇಳಿತು.

ಡೀಡ್ ರದ್ದು ಮಾಡಬೇಕಾದರೆ ಅದನ್ನೂ ಎರಡೂ ಕಡೆಯಿಂದ ಮಾಡಬೇಕಾಗುತ್ತದೆ. ಒಮ್ಮೆ ನೋಂದಾಯಿತ ದಾಖಲೆ ಜಾರಿಯಾದರೆ, ಅದನ್ನು ರದ್ದುಗೊಳಿಸಲು ಆ ವ್ಯಕ್ತಿ ಬಯಸಿದರೆ ಆಗ ವಿಶೇಷ ಪರಿಹಾರ ಕಾಯಿದೆ ಸೆಕ್ಷನ್ 31 ಅಡಿ ಲಭ್ಯವಿರುವ ಪರಿಹಾರವನ್ನು ಅವರು ಪಡೆದುಕೊಳ್ಳಬೇಕಾಗುತ್ತದೆ.

ಅದರೆ, ಭಾರತೀಯ ನೋಂದಣಿ ಕಾಯಿದೆ 1908ರಲ್ಲಿ ಅದಕ್ಕೆ ಯಾವುದೇ ಪರಿಹಾರ ಇಲ್ಲ. ಹೀಗಾಗಿ, ಉಪ ನೋಂದಣಾಧಿಕಾರಿಗೆ ನೋಂದಾಯಿತ ಜಿಪಿಎ ರದ್ದುಗೊಳಿಸುವ ಅಧಿಕಾರವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಕಾನೂನು ಇಲ್ಲದ ಕಾರಣ ಸಬ್ ರಿಜಿಸ್ಟ್ರಾರ್‍ಗೆ ನೋಂದಾಯಿತ ದಾಖಲೆ ರದ್ದುಗೊಳಿಸುವ ಅಧಿಕಾರವಿದೆ ಎಂಬ ಊಹಿಸಿಕೊಂಡು ಕಾರ್ಯನಿರ್ವಹಿಸುವಂತಿಲ್ಲ ಎಂದು ಪೀಠ ತಿಳಿಸಿದೆ.

ಪ್ರಕರಣವೇನು?: ಅರ್ಜಿದಾರರು ತಮ್ಮ ಹಾಗೂ ತಮ್ಮ ಪತಿ ಹೆಸರಿನಲ್ಲಿ ತಮ್ಮ ವಹಿವಾಟು ನಿಯಂತ್ರಣ, ಆದಾಯ ತೆರಿಗೆ ಪಾವತಿ ಮತ್ತು ಅಡವಿಟ್ಟು ಆಸ್ತಿಗಾಗಿ ತಮ್ಮಲ್ಲಿರುವ ಹಣವನ್ನು ಪಾವತಿಸಲು ಜಂಟಿಯಾಗಿ ಜಿಪಿಎ ನೋಂದಣಿ ಮಾಡಿಸಿಕೊಂಡಿದ್ದರು. ನಂತರ ಅದನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಿದ್ದರು. ಆದರೆ ಅದನ್ನು ರದ್ದು ಮಾಡಲಾಗದು ಎಂದು ಉಪ ನೋಂದಣಾಧಿಕಾರಿ ಹಿಂಬರಹ ನೀಡಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News