ರಾಜ್ಯ ವಕ್ಫ್‌ ಬೋರ್ಡ್ ನೂತನ ಅಧ್ಯಕ್ಷರಾಗಿ ಸೈಯದ್ ಮುಹಮ್ಮದ್ ಅಲಿ ಹುಸೈನಿ ಆಯ್ಕೆ

Update: 2025-03-15 13:15 IST
ರಾಜ್ಯ ವಕ್ಫ್‌ ಬೋರ್ಡ್ ನೂತನ ಅಧ್ಯಕ್ಷರಾಗಿ ಸೈಯದ್ ಮುಹಮ್ಮದ್ ಅಲಿ ಹುಸೈನಿ ಆಯ್ಕೆ

ಸೈಯದ್ ಮುಹಮ್ಮದ್ ಅಲಿ ಹುಸೈನಿ 

  • whatsapp icon

ಬೆಂಗಳೂರು : ರಾಜ್ಯ ವಕ್ಫ್ ಬೋರ್ಡ್‍ನ ನೂತನ ಅಧ್ಯಕ್ಷರಾಗಿ ಗುಲ್ಬರ್ಗದ ಹಝ್ರತ್ ಖ್ವಾಜಾ ಬಂದಾ ನವಾಝ್ ದರ್ಗಾದ ಸಜ್ಜಾದ ನಶೀನ್ ಸೈಯದ್ ಮುಹಮ್ಮದ್ ಅಲಿ ಹುಸೈನಿ ಆಯ್ಕೆಯಾಗಿದ್ದಾರೆ.

ಶನಿವಾರ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸೈಯದ್ ಮುಹಮ್ಮದ್ ಅಲಿ ಹುಸೈನಿ ಚುನಾಯಿತರಾದರು. ಇದಕ್ಕೂ ಮುನ್ನ ಅಧ್ಯಕ್ಷ ಸ್ಥಾನಕ್ಕಾಗಿ ಫೆ.17ರಂದು ಚುನಾವಣೆ ನಿಗದಿಯಾಗಿತ್ತು. ಆದರೆ, ಕಾರಣಾಂತರಗಳಿಂದ ಚುನಾವಣೆಯನ್ನು ಮುಂದೂಡಲಾಗಿತ್ತು.

ಚುನಾವಣೆ ಬಹಿಷ್ಕಾರ: ರಾಜ್ಯ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಕೆ.ಅನ್ವರ್ ಬಾಷಾ, ಶಾಸಕ ಎನ್.ಎ.ಹಾರಿಸ್, ಆರ್.ಅಬ್ದುಲ್ ರಿಯಾಝ್ ಖಾನ್, ರಾಜ್ಯ ಸರಕಾರದಿಂದ ವಕ್ಫ್ ಬೋರ್ಡ್‍ಗೆ ನಾಮ ನಿರ್ದೇಶನಗೊಂಡಿದ್ದ ಮೌಲಾನಾ ಸೈಯದ್ ತನ್ವೀರ್ ಹಾಶ್ಮಿ, ಮೌಲಾನಾ ಮೀರ್ ಖಾಸಿಮ್ ಅಬ್ಬಾಸ್ ಹಾಗೂ ಖಾಲಿದ್ ಅಹ್ಮದ್ ಚುನಾವಣೆಯನ್ನು ಬಹಿಷ್ಕರಿಸಿದ್ದರು.

ಇನ್ನುಳಿದಂತೆ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್, ಶಾಸಕಿ ಕನೀಝ್ ಫಾತಿಮಾ, ಆಸಿಫ್ ಅಲಿ, ಐಪಿಎಸ್ ಅಧಿಕಾರಿ ಸಾರಾ ಫಾತಿಮಾ ಹಾಗೂ ಸೈಯದ್ ಮುಹಮ್ಮದ್ ಅಲಿ ಹುಸೈನಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಚುನಾಯಿತರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೈಯದ್ ಮುಹಮ್ಮದ್ ಅಲಿ ಹುಸೈನಿ, ನನಗೆ ಎಲ್ಲ ಶಾಸಕರು, ಜಿಲ್ಲಾ ಮಟ್ಟದ ಅಧ್ಯಕ್ಷರು ಎಲ್ಲರೂ ಸಹಕಾರ ನೀಡಿದ್ದಾರೆ. ವಕ್ಫ್ ಮಂಡಳಿಯನ್ನು ಉತ್ತಮವಾಗಿ ನಡೆಸಿ, ಉತ್ತಮ ಕೆಲಸಗಳನ್ನು ಮಾಡಲು ಶ್ರಮಿಸುತ್ತೇನೆ. ವಕ್ಫ್ ಆಸ್ತಿಗಳ ಅಭಿವೃದ್ಧಿ ಮಾಡಿ ಸಮುದಾಯಕ್ಕೆ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ರಾಜ್ಯ ಸರಕಾರವು ನನಗೆ ಸಹಕಾರ ನೀಡಿದೆ. ಮುಖ್ಯಮಂತ್ರಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲ ಹಿರಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಚುನಾವಣೆ ಬಹಿಷ್ಕರಿಸಿ ಹೋಗಿರುವವರು ನನಗೆ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸವಿದೆ. ನಾನು ಯಾವತ್ತೂ ಯಾರನ್ನು ವಿರೋಧಿಸಿದವನಲ್ಲ. ಎಲ್ಲರೂ ಜೊತೆಯಾಗಿ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವುದು ನಮ್ಮ ಮುಖ್ಯ ಗುರಿಯಾಗಲಿದೆ ಎಂದು ಸೈಯದ್ ಮುಹಮ್ಮದ್ ಅಲಿ ಹುಸೈನಿ ತಿಳಿಸಿದರು.

ವಕ್ಫ್ ಸಂಸ್ಥೆಗಳ ಅಭಿವೃದ್ಧಿ ಮಾಡಬೇಕಿದೆ. ಹಲವಾರು ಸಂಸ್ಥೆಗಳಲ್ಲಿ ಭೂಮಿಯಿದೆ. ಆದರೆ, ಅದನ್ನು ಅಭಿವೃದ್ಧಿಪಡಿಸಲು ಅವರ ಬಳಿ ಹಣಕಾಸಿನ ಸೌಲಭ್ಯ ಇಲ್ಲ. ಅಂತಹ ಆಸ್ತಿಗಳನ್ನು ಗುರುತಿಸಿ ಅಭಿವೃದ್ಧಿ ಮಾಡಲು ಕಾರ್ಯ ಯೋಜನೆ ರೂಪಿಸಲಾಗುವುದು. ಸಚಿವ ಝಮೀರ್ ಅಹ್ಮದ್ ಖಾನ್ ಅವರ ಜೊತೆಯೂ ನಾನು ಮಾತನಾಡಿದ್ದೇನೆ. ಅವರ ಸಹಕಾರವು ನನಗೆ ಇರಲಿದೆ ಎಂದು ಅವರು ಹೇಳಿದರು.

ವಕ್ಫ್ ಬೋರ್ಡ್‍ನಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ. ಇದೊಂದು ಧಾರ್ಮಿಕ ಸಂಸ್ಥೆಯಾಗಿದ್ದು, ಇಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದು ಸಮುದಾಯಕ್ಕೆ ಕಳಂಕ ತರುವಂತೆ. ಆದುದರಿಂದ, ಇಂತಹ ಕಳಂಕ ತಾಗದಂತೆ ಮೊದಲ ದಿನದಿಂದಲೆ ಕ್ರಮ ವಹಿಸಲಾಗುವುದು ಎಂದು ಸೈಯದ್ ಮುಹಮ್ಮದ್ ಅಲಿ ಹುಸೈನಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News