ಶಾಸಕರ ಹಾಜರಾತಿ ಪರಿಶೀಲನೆಗೆ ತಂತ್ರಜ್ಞಾನ ಅಳವಡಿಕೆ: ಸ್ಪೀಕರ್ ಯು.ಟಿ. ಖಾದರ್
ಬೆಂಗಳೂರು: ಮಳೆಗಾಲ ಅಧಿವೇಶನದಲ್ಲಿ ಹಾಜರಾಗುವ ಸಚಿವರ ಮತ್ತು ಶಾಸಕರ ಹಾಜರು ಪರಿಶೀಲನೆಗಾಗಿ ವಿಶಿಷ್ಟ ರೀತಿಯ ತಂತ್ರಜ್ಞಾನ ಅಳವಡಿಕೆ ಮಾಡಲಾಗುವುದು ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜು.15ರಿಂದ ಆರಂಭವಾಗುವ ಅಧಿವೇಶನದ ಕುರಿತು ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಧಿವೇಶನಕ್ಕೆ ಹಾಜರಾಗುವ ಸಚಿವರು ಮತ್ತು ಶಾಸಕರ ಹಾಜರು ಪರಿಶೀಲನೆಗಾಗಿ ಈ ಬಾರಿ ವಿಶಿಷ್ಟ ರೀತಿಯ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದರು.
ಈ ತಂತ್ರಜ್ಞಾನದಿಂದಾಗಿ ಯಾರು ಎಷ್ಟು ಸಮಯ ಅಧಿವೇಶನದಲ್ಲಿ ಹಾಜರಿದ್ದರು, ದಿನಕ್ಕೆ ಎಷ್ಟು ಬಾರಿ ಅಧಿವೇಶನದ ಸಭಾಂಗಣಕ್ಕೆ ಬಂದು ಹೋದರು ಎಂಬ ಬಗ್ಗೆ ನಿಖರವಾದ ಮಾಹಿತಿ ದೊರೆಯಲಿದೆ. ಅದನ್ನು ಈ ಬಾರಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಅಧಿವೇಶನ ಜು.15ರಿಂದ ಜು.26ರ ವರೆಗೆ ಒಟ್ಟು 9 ದಿನಗಳ ಕಾಲ ನಡೆಯಲಿದ್ದು, ಮೊದಲ ದಿನ 16ನೆ ವಿಧಾನಸಭೆಯ 3ನೆ ಅಧಿವೇಶನವು ಮುಕ್ತಾಯವಾದ ನಂತರ ಇಲ್ಲಿಯವರೆಗೆ ನಿಧನ ಹೊಂದಿರುವ ಗಣ್ಯವ್ಯಕ್ತಿಗಳ ಕುರಿತು ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಲಾಗುವುದು. ನಂತರ ಸರಕಾರದಿಂದ ಸ್ವೀಕರಿಸಲಾಗುವ ವಿಧೇಯಕಗಳನ್ನು ಪರ್ಯಾಲೋಚನೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಒಟ್ಟು 9 ದಿನಗಳ ಕಾಲದ ಅಧಿವೇಶನದಲ್ಲಿ ಪ್ರಶೋತ್ತರ ಕಲಾಪವನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೆ ಗಮನ ಸೆಳೆಯುವ ಸೂಚನೆಗಳು, ಶೂನ್ಯವೇಳೆ, ನಿಲುವಳಿ ಸೂಚನೆ, ನಿಯಮ 69ರ ಸೂಚನೆಗಳು, ಖಾಸಗಿ ಸದಸ್ಯರುಗಳ ಕಾರ್ಯಕಲಾಪಗಳನ್ನು ನಡೆಸಲಾಗುವುದು ಎಂದು ಅವರು ವಿವರಿಸಿದರು.
2023-24ನೆ ಸಾಲಿನ ಕರ್ನಾಟಕ ವಿಧಾನ ಮಂಡಲ, ವಿಧಾನ ಸಭೆಯ ಸ್ಥಾಯಿ ಸಮಿತಿಗಳ ಅವಧಿಯು ಆ.8ರಂದು ಮುಕ್ತಾಯಗೊಳ್ಳುತ್ತಿರುವುದರಿಂದ 2024-25ನೆ ಸಾಲಿಗೆ ಹೊಸದಾಗಿ ಸಮಿತಿಗಳನ್ನು ರಚಿಸುವ ಸಂಬಂಧ ಚುನಾವಣಾ ಪ್ರಸ್ತಾವವನ್ನು ಮಂಡಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಎಂದಿನಂತೆ ಈ ಬಾರಿಯು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಅಧಿವೇಶನ ವೀಕ್ಷಿಸಲು ಬರುವ ವಿದ್ಯಾರ್ಥಿಗಳನ್ನು ಬಿಸಿಲು ಮತ್ತು ಮಳೆಯಿಂದ ರಕ್ಷಿಸುವ ಸಲುವಾಗಿ ಅವರಿಗಾಗಿ ವಿಧಾನಸೌಧದ ಬ್ಯಾಂಕ್ವೇಟ್ ಹಾಲ್ ಸಭಾಂಗಣದಲ್ಲಿ ಅಗತ್ಯ ವ್ಯವಸ್ಥೆಯನ್ನು ಈ ಬಾರಿ ಕೈಗೊಳ್ಳಲಾಗಿದೆ. ಅದೇ ರೀತಿ ವಿವಿಧ ರಾಜ್ಯ, ಜಿಲ್ಲೆ, ತಾಲ್ಲೂಕುಗಳಿಂದ ಬರುವ ಜನರಿಗೂ ಸಹ ಅಧಿವೇಶನ ವೀಕ್ಷಿಸಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಈ ಬಾರಿ ಸದನಲ್ಲಿ ಉತ್ತರಿಸುವ ಸಲುವಾಗಿ ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳು, ಸದನದಲ್ಲಿ ಉತ್ತರಿಸುವ ಪ್ರಶ್ನೆಗಳು, ನಿಯಮ 71ರಡಿ ಉತ್ತರಿಸುವ ಪ್ರಶ್ನೆಗಳು, ನಿಯಮ 331ರಡಿ ಉತ್ತರಿಸುವ ಪ್ರಶ್ನೆಗಳು ಸೇರಿದಂತೆ ಒಟ್ಟು 854 ಪ್ರಶ್ನೆಗಳನ್ನು ಸ್ವಿಕರಿಸಲಾಗಿದೆ ಎಂದು ತಿಳಿಸಿದರು.
ಈ ಬಾರಿ ಕಳೆದ ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿ ಮಂಡಿಸಲಾದ 2 ವಿಧೇಯಕಗಳನ್ನು ಪರಿಷತ್ತಿನಲ್ಲಿ ಅಂಗೀಕಾರಕ್ಕಾಗಿ ತೆಗೆದುಕೊಳ್ಳಲಾಗುವುದು. ಸದನವು ವರ್ಷಕ್ಕೆ 60 ದಿನಗಳ ಕಾಲ ನಡೆಯಬೇಕು ಎಂಬ ನಿಯಮವನ್ನು ಅಳವಡಿಸಿಕೊಳ್ಳಲಾಗಿದೆ. ಅದರಂತೆ ವರ್ಷಕ್ಕೆ 60 ದಿನ ಸದನವು ನಡೆದರೆ ರಾಜ್ಯದ ಮತ್ತು ಜನರ ಸಮಸ್ಯೆಗಳು ಪರಿಹಾರವಾಗುವುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ತಿನ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ, ವಿಧಾನ ಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಸೇರಿದಂತೆ ಪ್ರಮುಖರಿದ್ದರು.
ಜು.20ಕ್ಕೆ ಚೆಸ್ ಪಂದ್ಯ: ವಿಶ್ವ ಚೆಸ್ ದಿನಾಚರಣೆಯ ಅಂಗವಾಗಿ ಈ ಬಾರಿ ಸಚಿವರು, ಶಾಸಕರು ಅಧಿಕಾರಿಗಳಿಗೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ‘ಲೆಜಿಸ್ಲೇಚರ್ ಕಫ್’ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿಯಲ್ಲಿ ಪತ್ರಕರ್ತರೂ ಭಾಗವಹಿಸಬಹುದಾಗಿದ್ದು, ಅವರೂ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಯು.ಟಿ.ಖಾದರ್ ತಿಳಿಸಿದರು.
ಶಾಸಕರಿಗೆ ಪ್ರಶಸ್ತಿ: ಈ ಬಾರಿ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಈ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವ ಸಲುವಾಗಿ ಆಯ್ಕೆ ಸಮಿತಿಯನ್ನು ಶೀಘ್ರದಲ್ಲಿಯೇ ರಚಿಸಲಾಗುವುದು ಎಂದು ಸ್ಪೀಕರ್ ಖಾದರ್ ತಿಳಿಸಿದರು.