ʻಗೃಹಲಕ್ಷ್ಮಿʻ ಯೋಜನೆಯ ಸೆಪ್ಟೆಂಬರ್ ತಿಂಗಳ ಹಣ ಹಂತ ಹಂತವಾಗಿ ಬಿಡುಗಡೆಯಾಗುತ್ತಿದೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Update: 2023-11-02 14:26 GMT

ಬೆಂಗಳೂರು, ನ.2: ರಾಜ್ಯ ಸರಕಾರದ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಹಣ ಸಂದಾಯ ಮಾಡಬೇಕು. ತಾಂತ್ರಿಕ ಕಾರಣಗಳಿಂದ ಸಮಸ್ಯೆ ಎದುರಿಸುತ್ತಿರುವ ಫಲಾನುಭವಿಗಳ ಖಾತೆಗೆ ಶೀಘ್ರ ಹಣ ಸಂದಾಯವಾಗುವಂತೆ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೂಚಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕೆಂದು ತಿಳಿಸಿದರು.

ಇಲಾಖೆಯ ಉಪ ನಿದೇಶಕರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಇ-ಗವರ್ನೆನ್ಸ್ ಇಲಾಖೆಯ ಸಹಕಾರದೊಂದಿಗೆ ಆಗಿರುವ ಕೆಲವೊಂದು ತಾಂತ್ರಿಕ ನೂನ್ಯತೆಗಳನ್ನು ಸರಿಪಡಿಸಬೇಕು. ಅಂಗನವಾಡಿ ಕಾರ್ಯಕರ್ತೆಯರ ಸಹಕಾರದೊಂದಿಗೆ ಮನೆ ಮನೆಗೆ ತೆರಳಿ ನೋಂದಣಿಯಲ್ಲಿ ಆಗಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕೆಂದು ಲಕ್ಷ್ಮಿ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚಿಸಿದರು.

ಆಗಸ್ಟ್ ತಿಂಗಳಿನಲ್ಲಿ ಶೇ.88ರಷ್ಟು ಮಂದಿಗೆ ಹಣ ಸಂದಾಯವಾಗಿದ್ದು, ಸೆಪ್ಟೆಂಬರ್ ತಿಂಗಳ ಹಣ ಹಂತ ಹಂತವಾಗಿ ಸಂದಾಯವಾಗುತ್ತಿದೆ. ಅಕ್ಟೋಬರ್ ತಿಂಗಳ ಹಣ ಶೇ.100ರಷ್ಟು ಫಲಾನುಭವಿಗಳಿಗೆ ಸಂದಾಯವಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಡಾ.ಜಿ.ಸಿ. ಪ್ರಕಾಶ್, ನಿರ್ದೇಶಕಿ ಎಂ.ಎಸ್.ಅರ್ಚನಾ, ಸಚಿವರ ಆಪ್ತ ಕಾರ್ಯದರ್ಶಿ ಡಾ.ಟಿ.ಎಚ್.ವಿಶ್ವನಾಥ್ ಸೇರಿದಂತೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News