ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದ ಚುನಾವಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‍ನಿಂದ ವಜಾ

Update: 2023-09-05 14:58 GMT

ಬೆಂಗಳೂರು, ಸೆ.5: ರಾಜ್ಯ ವಕ್ಫ್ ಬೋರ್ಡ್‍ನ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸರಕಾರ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ಈ ಸಂಬಂಧ ಬಾಗಲಕೋಟೆ ಜಿಲ್ಲೆ ಹುನಗುಂದ ನಿವಾಸಿ ಅಬ್ದುಲ್ ಜಬ್ಬಾರ್ ಕಲಬುರಗಿ ಎಂಬುವವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಆರ್. ದೇವದಾಸ್ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ವಕೀಲರ ವಾದ ಆಲಿಸಿದ ನ್ಯಾಯಪೀಠವು ವಕ್ಫ್ ಬೋರ್ಡ್‍ನ ಅಧ್ಯಕ್ಷ ಸ್ಥಾನದ ಚುನಾವಣೆಯ ಅಧಿಸೂಚನೆ ರದ್ದುಪಡಿಸಬೇಕು ಎಂಬ ಅರ್ಜಿದಾರ ಅಬ್ದುಲ್ ಜಬ್ಬಾರ್ ಅವರ ಮನವಿಯನ್ನು ತಿರಸ್ಕರಿಸಿ ಅರ್ಜಿಯನ್ನು ವಜಾಗೊಳಿಸಿತು.

ಅಲ್ಲದೆ, 2020ರಿಂದ ಖಾಲಿ ಇರುವ ವಕ್ಫ್ ಮಂಡಳಿಯ ಮುತವಲ್ಲಿ ಕೋಟಾದ ಒಂದು ಸದಸ್ಯ ಸ್ಥಾನವನ್ನು ಭರ್ತಿ ಮಾಡುವಂತೆ ಅರ್ಜಿದಾರರು ಆ.8ರಂದು ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿತು.

ಹೈಕೋರ್ಟ್ ಈ ಆದೇಶದಿಂದ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯ ಫಲಿತಾಂಶ ಪ್ರಕಟಿಸಲು ಇದ್ದ ಕಾನೂನು ಅಡ್ಡಿ ದೂರವಾದಂತಾಗಿದೆ. ಚುನಾವಣೆ ನಡೆಸಬಹುದು, ಆದರೆ ಫಲಿತಾಂಶ ಪ್ರಕಟಿಸುವಂತಿಲ್ಲ ಎಂದು ಹೈಕೋರ್ಟ್ ಈ ಹಿಂದೆ ಆದೇಶ ನೀಡಿತ್ತು. ನಿಗದಿಯಂತೆ ಸೋಮವಾರ(ಸೆ.4) ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು.

ಆದರೆ, ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಿಸಿರಲಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಚಿತ್ರದುರ್ಗ ಮೂಲದ ಅನ್ವರ್ ಬಾಷಾ ಅವಿರೋಧವಾಗಿ ಆಯ್ಕೆಗೊಂಡಿದ್ದರು.

ವಕ್ಫ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಾದರೆ ಪೂರ್ಣ ಪ್ರಮಾಣದಲ್ಲಿ ಮಂಡಳಿ ರಚನೆಯಾಗಬೇಕು. ಆದರೆ, ಮುತವಲ್ಲಿ ಕೋಟಾದ ಒಂದು ಸದಸ್ಯ ಸ್ಥಾನ 2020ರ ಆ.8ರಿಂದ ಖಾಲಿ ಇದೆ. ಹೀಗಿದ್ದಾಗ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದು ಸೂಕ್ತವಲ್ಲ. ಹೀಗಾಗಿ, ಖಾಲಿ ಇರುವ ಒಂದು ಸ್ಥಾನ ಭರ್ತಿ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿತ್ತು.

ಸರಕಾರ ಅದನ್ನು ಪರಿಗಣಿಸಿಲ್ಲ. ಆದುದರಿಂದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸರಕಾರ ಆ.23ರಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ಅಲ್ಲದೆ, ಮುತುವಲ್ಲಿ ಕೋಟಾದ ಖಾಲಿ ಇರುವ ಒಂದು ಸದಸ್ಯ ಸ್ಥಾನವನ್ನು ತುಂಬಲು ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

ಅರ್ಜಿದಾರರ ಪರ ಹಿರಿಯ ವಕೀಲೆ ಎಸ್. ಸುಶೀಲಾ ವಾದ ಮಂಡಿಸಿದರು. ವಕ್ಫ್ ಮಂಡಳಿಯ ಸದಸ್ಯರು ಮಾತ್ರ ಅಧ್ಯಕ್ಷ ಸ್ಥಾನದ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಆದರೆ, ಅರ್ಜಿದಾರರು ವಕ್ಫ್ ಮಂಡಳಿಯ ಸದಸ್ಯರಲ್ಲ. ಹೀಗಾಗಿ ಅವರು ಅರ್ಜಿ ಸಲ್ಲಿಸುವ ಹಕ್ಕು ಹೊಂದಿಲ್ಲ. ಅಷ್ಟಕ್ಕೂ 2020ರಿಂದ ಮುತವಲ್ಲಿ ಕೋಟಾದ ಒಂದು ಸದಸ್ಯ ಸ್ಥಾನ ಖಾಲಿ ಇದ್ದರೂ, ಆ ವಿಚಾರವನ್ನು ಈಗ ಎತ್ತಿರುವ ಅರ್ಜಿದಾರರು ಆ.8ರಂದμÉ್ಟೀ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಅಲ್ಲದೇ ಈ ವಿಚಾರವಾಗಿ ಇದೇ ಮೊದಲ ಬಾರಿಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ಅರ್ಜಿ ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂದು ಸರಕಾರ ಮತ್ತು ವಕ್ಫ್ ಮಂಡಳಿ ವಾದಿಸಿತ್ತು. ಸರಕಾರದ ಪರವಾಗಿ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಶೇಖ್ ಇಸ್ಮಾಯಿಲ್ ಝಬೀವುಲ್ಲಾ ವಾದ ಮಂಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News