ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಬದಲಾವಣೆ ಆದೇಶ ಅಮಾನತ್ತಿನಲ್ಲಿಟ್ಟಿರುವ ಹೈಕೋರ್ಟ್
ಬೆಂಗಳೂರು, ಸೆ.5: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್‍ಪಿಸಿಬಿ)ಯ ಅಧ್ಯಕ್ಷ ಸ್ಥಾನದಿಂದ ಶಾಂತ್ ತಿಮ್ಮಯ್ಯ ಅವರನ್ನು ಬದಲಿಸುವ ಕುರಿತಂತೆ ಸರಕಾರ ಹೊರಡಿಸಿದ್ದ ತಿದ್ದುಪಡಿ ಆದೇಶವನ್ನು ಹೈಕೋರ್ಟ್ ಮುಂದಿನ ವಿಚಾರಣೆಯವರೆಗೂ ಅಮಾನತ್ತಿನಲ್ಲಿಟ್ಟಿದೆ.
ಕೆಎಸ್‍ಪಿಸಿಬಿ ಅಧ್ಯಕ್ಷ ಸ್ಥಾನದಿಂದ ತಮ್ಮ ಅಧಿಕಾರವಧಿ ಮೊಟಕುಗೊಳಿಸಿದ್ದ ಕ್ರಮವನ್ನು ಪ್ರಶ್ನಿಸಿ ಹಾಲಿ ಅಧ್ಯಕ್ಷ ಶಾಂತ್ ತಿಮ್ಮಯ್ಯ ಸಲ್ಲಿಸಿರುವ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಮಧ್ಯಂತರ ಆದೇಶ ಮಾಡಿ ವಿಚಾರಣೆಯನ್ನು ಸೆ.7ಕ್ಕೆ ಮುಂದೂಡಿದೆ.
ಪ್ರಕರಣದಲ್ಲಿ ರಾಜ್ಯ ಸರಕಾರದ ಕೈಗೊಂಡಿರುವ ಕ್ರಮವನ್ನು ಬೆಂಬಲಿಸಿದ ಅಡ್ವೋಕೇಟ್ ಜನರಲ್ ಅವರು ಅರ್ಜಿ ಕುರಿತಂತೆ ಹೆಚ್ಚಿನ ವಿಚಾರಣೆ ನಡೆಯಬೇಕಿದೆ ಎಂದು ತಿಳಿಸಿದ್ದಾರೆ. ಆದರೆ, ಕಾಲಾವಕಾಶದ ಕೊರತೆ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಸೆ.7ಕ್ಕೆ ಮುಂದೂಡಲಾಗಿದೆ. ಹೀಗಾಗಿ, ಅರ್ಜಿಯ ಮುಂದಿನ ವಿಚಾರಣೆವರೆಗೆ ಕೆಎಸ್‍ಪಿಸಿಬಿ ಅಧ್ಯಕ್ಷರನ್ನು ಬದಲಿಸಬಾರದು ಎಂಬ ಆದೇಶವಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದಿಂದ ಶಾಂತ್ ತಿಮ್ಮಯ್ಯ ಅವರ ಅವಧಿ ಮುಗಿದಿದೆ. ಹೀಗಾಗಿ, ಅವರ ಸ್ಥಾನಕ್ಕೆ ಹೊಸದಾಗಿ ನೇಮಕಾತಿ ನಡೆಸಬೇಕಿದೆ. ನೇಮಕಾತಿ ನಡೆಯುವರೆಗೂ ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆ ಕಾರ್ಯದರ್ಶಿಯನ್ನು ಕೆಎಸ್‍ಪಿಸಿಬಿ ಅಧ್ಯಕ್ಷರಾಗಿ ಹೆಚ್ಚುವರಿ ಜವಾಬ್ದಾರಿ ಹೊರಿಸಲಾಗಿದೆ ಎಂದು ತಿಳಿಸಿ ಸರಕಾರ ಗುರುವಾರ ಅಧಿಸೂಚನೆ ಹೊರಡಿಸಿತ್ತು.
ಈ ಹಿಂದೆ ಅಧ್ಯಕ್ಷರಾಗಿದ್ದ ಜಯರಾಂ ಅವರು ರಾಜೀನಾಮೆ ನೀಡಿದ್ದರು. ಅವರ ಸ್ಥಾನ ಮುಂದುವರೆದು ಶಾಂತ್ ತಿಮ್ಮಯ್ಯ ನೇಮಕ ಮಾಡಲಾಗಿತ್ತು ಎಂದು ಸರಕಾರ ತಿಳಿಸಿತ್ತು.
ಅದನ್ನು ಪ್ರಶ್ನಿಸಿ ಶಾಂತ್ ತಿಮ್ಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.