ಸರಕಾರಿ ಶಾಲೆಗಳನ್ನು ಗುತ್ತಿಗೆ ಕೊಡುವ ಪ್ರಸ್ತಾವ ಇಲ್ಲ: ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ
ಮಂಡ್ಯ, ಆ.18: ಖಾಸಗಿ ಸಹಭಾಗಿತ್ವದಲ್ಲಿ ಸರಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಬಹುದು. ಆದರೆ, ಖಾಸಗಿಯವರಿಗೆ ಗುತ್ತಿಗೆ ಕೊಡುವ ಯಾವುದೇ ಪ್ರಸ್ತಾವ ಇಲಾಖೆಯ ಮುಂದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಸರಕಾರಿ ಶಾಲೆಗಳ ಖಾಸಗೀಕರಣ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರಕಾರಿ ಶಾಲೆಗಳನ್ನು ಖಾಸಗೀಕರಣ ಮಾಡುವುದು ಅಥವಾ ಖಾಸಗಿಯವರೆಗೆ ಗುತ್ತಿಗೆ ನೀಡುವುದು ಅಸಾಧ್ಯ ಎಂದರು.
ಶಿಕ್ಷಕರ ನೇಮಕಾತಿ ವಿಚಾರ ಹೈಕೋರ್ಟ್‍ನಲ್ಲಿದ್ದು ವರದಿ ಸಲ್ಲಿಸುವಂತೆ ಸೂಚಿಸಿದೆ. ತೀರ್ಪು ಬರುವವರೆಗೂ ನೇಮಕಾತಿ ಪತ್ರ ನೀಡದಂತೆ ಕೋರ್ಟ್ ಸೂಚಿಸಿದ್ದು, ಅ.28ರಂದು ಪ್ರಕರಣ ವಿಚಾರಣೆಗೆ ಬರಲಿದೆ. ತೀರ್ಪು ಬಂದ ನಂತರ ತ್ವರಿತಗತಿಯಲ್ಲಿ 13,500 ಶಿಕ್ಷಕರ ನೇಮಕಾತಿಗೆ ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಪಿ) ಜಾರಿಯ ಹಿಂದೆ ಹಿಂದಿ ಭಾಷೆ ಹೇರುವ ಉದ್ದೇಶವಿದ್ದು, ಇದರಿಂದ ಕನ್ನಡ ಭಾಷೆಗೂ ಧಕ್ಕೆಯಾಗುತ್ತದೆ. ಹಿಂದಿ ಹೇರಿಕೆಯಿಂದ ಕನ್ನಡ ಭಾಷೆಯನ್ನೇ ಮರೆತುಬಿಡುವ ಸ್ಥಿತಿ ಬರಬಹುದು ಎಂದು ಅವರು ಆರೋಪಿಸಿದರು.
ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಎನ್‍ಇಪಿಯನ್ನು ವಿರೋಧಿಸಿದ್ದೆವು, ಪಠ್ಯ ಪರಿಷ್ಕರಣೆ ಮಾಡುವುದಾಗಿ ತಿಳಿಸಿದ್ದೆವು. ಈ ಕಾರಣಕ್ಕಾಗಿ ನಾವಿಂದು ಅಧಿಕಾರದಲ್ಲಿ ಕುಳಿತಿದ್ದೇವೆ. ಮಕ್ಕಳ ಶಿಕ್ಷಣ ರಾಜಕೀಯ ಪಕ್ಷಗಳ ಸಿದ್ಧಾಂತದ ಮೇಲೆ ನಡೆಯಬಾರದು. ನಮ್ಮ ಸರಕಾರ ಶಿಕ್ಷಣದಲ್ಲಿ ಉತ್ತಮ ವಾತಾವರಣ ರೂಪಿಸಲು ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಪ್ರತಿ ರಾಜ್ಯದಲ್ಲೂ ತನ್ನದೇ ಸಂಸ್ಕೃತಿ, ಭಾಷೆ, ಶಿಕ್ಷಣ ವ್ಯವಸ್ಥೆ ಇರುತ್ತದೆ. ಕೇಂದ್ರ ಸರಕಾರ ಒಂದು ರಾಜ್ಯದ ಸಂಸ್ಕøತಿಯನ್ನು ಇನ್ನೊಂದು ರಾಜ್ಯದ ಮೇಲೆ ಹೇರುವ ಕೆಟ್ಟ ಕೆಲಸ ಮಾಡುತ್ತಿದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು ಎಲ್ಲಾ ರಾಜ್ಯಗಳ ಸಂಸ್ಕೃತಿ, ಭಾಷೆ ಹಾಗೂ ಶಿಕ್ಷಣಕ್ಕೆ ಗೌರವ ನೀಡಬೇಕು ಎಂದು ಅವರು ಹೇಳಿದರು.
“ಕಾವೇರಿ ನದಿ ನೀರಿನ ವಿಷಯದಲ್ಲಿ ಕೇಂದ್ರ ಸರಕಾರದ ಬಳಿ ಬೀಗದ ಕೀ ಇದೆ. ರಾಜ್ಯದಿಂದ ಗೆದ್ದು ಹೋಗಿರುವ 26 ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ? ತಮಿಳುನಾಡಿಗೆ ನೀರು ಹರಿದು ಹೋಗುತ್ತಿದ್ದರೂ ಅವರು ಏಕೆ ಧ್ವನಿ ಎತ್ತುತ್ತಿಲ್ಲ? ಅವರು ಸಂಸತ್ತಿನಲ್ಲಿ ಕೂಡಲೆ ಕಾವೇರಿ ವಿಚಾರದಲ್ಲಿ ಧ್ವನಿ ಎತ್ತಬೇಕು. ಪ್ರಧಾನಿಯವರ ಮುಂದೆ ಕಾವೇರಿ ವಿಚಾರವನ್ನು ಪ್ರಸ್ತಾಪ ಮಾಡಬೇಕು.”
-ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ.