ಕರ್ನಾಟಕದಲ್ಲೂ ಮದರಸ ಬೋರ್ಡ್ ಸ್ಥಾಪನೆಗೆ ಚಿಂತನೆ: ಸಚಿವ ಝಮೀರ್ ಅಹ್ಮದ್ ಖಾನ್

Update: 2023-09-11 02:57 GMT

ಬೆಂಗಳೂರು, ಸೆ. 10: ‘ಕೇರಳ ರಾಜ್ಯದ ಮಾದರಿಯಲ್ಲಿಯೇ ಕರ್ನಾಟಕದಲ್ಲೂ ಮದರಸ ಬೋರ್ಡ್ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ’ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್. ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ರವಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್ಸೆಸ್ಸೆಫ್) 50ನೆ ವರ್ಷಾಚರಣೆಯ ಅಂಗವಾಗಿ ಗೋಲ್ಡನ್ ಫಿಪ್ಟಿ ಮಹಾ ಸಮ್ಮೇಳನದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿ ಮದರಸ ಶಿಕ್ಷಣ ಎಲ್ಲರಿಗೂ ಮಾದರಿ. ನಮ್ಮ ರಾಜ್ಯದಲ್ಲೂ ಮದರಸಗಳಲ್ಲಿ ಕನ್ನಡ ಕಲಿಸಲು ತೀರ್ಮಾನ ಮಾಡಿದ್ದೇವೆ. ಅಲ್ಲದೆ, ರಾಜ್ಯದಲ್ಲೂ ಮದರಸ ಬೋರ್ಡ್ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಅಲ್ಪಸಂಖ್ಯಾತ ಸಮುದಾಯ ವಿದ್ಯಾರ್ಥಿಗಳಿಗೆ ಹಿಂದಿನ ಬಿಜೆಪಿ ಸರಕಾರ ನಿಲ್ಲಿಸಿದ್ದ ವಿದ್ಯಾರ್ಥಿ ವೇತನ ಮತ್ತೆ ಆರಂಭಿಸಲಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಈಗಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಶಿಕ್ಷಣ ವಿಚಾರದಲ್ಲಿ ಎಲ್ಲ ರೀತಿಯ ನೆರವು ನೀಡುತ್ತಿದೆ. ಹೀಗಾಗಿ, ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿ ಎಂದು ಅವರು ಕರೆ ನೀಡಿದರು.

ಅಲ್ಪಸಂಖ್ಯಾತರ ಸಮುದಾಯ ಶಿಕ್ಷಣದಲ್ಲಿ ಹಿಂದೆ ಉಳಿದಿದೆ. ಶಿಕ್ಷಣ ಇದ್ದರೆ ಮಾತ್ರ ದೇಶದ ಪ್ರಗತಿ ಸಾಧ್ಯ. ಅಂತಹ ಕೆಲಸ ಸುನ್ನಿ ಸ್ಟೂಡೆಂಟ್ಸ್ ಸಂಸ್ಥೆಯಿಂದ ಆಗುತ್ತಿದೆ. ಇಲ್ಲಿ ವ್ಯಾಸಂಗ ಮಾಡಿದವರು ಐಎಎಸ್, ಐಪಿಎಸ್ ಸೇರಿದಂತೆ ಇನ್ನಿತರ ಉನ್ನತ ಅಧಿಕಾರಿಗಳಾಗಿದ್ದಾರೆ ಎಂದ ಅವರು, ಐವತ್ತು ವರ್ಷಗಳಿಂದ ಲಕ್ಷಾಂತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡುತ್ತಿರುವ ಈ ಸಂಸ್ಥೆ ಇಡೀ ವಿಶ್ವಕ್ಕೆ ಮಾದರಿ ಎಂದು ಶ್ಲಾಘಿಸಿದರು.

ಎಸ್ಸೆಸ್ಸೆಫ್ ರಾಜ್ಯ ಘಟಕದ ಅಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಮಾತನಾಡಿ, ‘ಎಸ್ಸೆಸ್ಸೆಫ್ ಸಾವಿರಾರು ಮದರಸ ನಡೆಸುತ್ತಿದ್ದು, ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ನಮ್ಮ ಸದಸ್ಯರು ಸಮಾಜಕ್ಕೆ ಮಾರಕ ಆಗುವ ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಂಡ ಉದಾಹರಣೆ ಇಲ್ಲ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೇರಳ ಮುಸ್ಲಿಮ್ ಜಮಾಅತ್ ಪ್ರಧಾನ ಕಾರ್ಯದರ್ಶಿ ಸೆಯ್ಯದ್ ಖಲೀಲುಲ್ ಬುಖಾರಿ ತಂಙಳ್, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷ, ಮಾಜಿ ಅಧ್ಯಕ್ಷ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ, ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News