ಶ್ರೀರಾಮ ಹೆಸರಿನಲ್ಲಿ ಹಿಂಸೆ ಮಾಡುವರು ಹಿಂದೂಗಳಲ್ಲ: ಆಚಾರ್ಯ ಪ್ರಮೋದ್ ಕೃಷ್ಣಂ
ಬೆಂಗಳೂರು: ಶ್ರೀರಾಮ ಹೆಸರಿನಲ್ಲಿ ಹಿಂಸೆ ಮಾಡುವರು, ಪ್ರಚೋದನೆ ನೀಡುವವರನ್ನು ನಾನು ಹಿಂದೂಗಳೆಂದು ಕರೆಯುವುದಿಲ್ಲ ಎಂದು ಹಿಂದೂ ಧಾರ್ಮಿಕ ಚಿಂತಕ ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿದ್ದಾರೆ.
ರವಿವಾರ ನಗರದ ಸೆಂಟ್ ಜೋಸೆಫ್ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ‘ವೈವಿಧ್ಯತೆ ಮತ್ತು ಐಕ್ಯತೆ’ ವಿಷಯಾಧಾರಿತವಾಗಿ ಏರ್ಪಡಿಸಿದ್ದ 31ನೆ ವರ್ಷದ ‘ಹುಸೇನ್ ಡೇ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾರ್ಯಾದ ಪುರುಷರು, ಶ್ರೀರಾಮನ ಹೆಸರಿನಲ್ಲಿ ಹತ್ಯೆಗೈದು ಒಂದು ಕುಟುಂಬದ ದೀಪವನ್ನು ಅರಿಸಲು ಮುಂದಾಗುತ್ತಿರುವುದು ಬಹುದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಇಸ್ಲಾಮ್ ಧರ್ಮದಲ್ಲಿ ಉಗ್ರವಾದಕ್ಕೆ ಬೆಂಬಲ ಇಲ್ಲವೇ ಇಲ್ಲ. ಆದರೆ, ಕೆಲವರು ಇದಕ್ಕೆ ವಿರುದ್ಧವಾಗಿ ನಡೆದುಕೊಂಡು ಧರ್ಮವನ್ನು ಅಪಮಾನಕ್ಕೆ ಒಳಗಾಗುವಂತೆ ಮಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಎಲ್ಲರೂ ಜಾಗೃತಿವಹಿಸಬೇಕು. ಕೆಟ್ಟವರು ಟೀಕಿಸಿ, ದೋಷಿಸುವ ಬದಲು ಅವರನ್ನು ಪರಿವರ್ತಿಸುವ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.
ಮನುಷ್ಯ ಸಮಾಜಕ್ಕೆ ಏನಾದರೂ ಕೊಟ್ಟು ಹೋಗಬೇಕು, ಇಲ್ಲವೇ ಬಿಟ್ಟು ಹೋಗಬೇಕು. ಏಕೆಂದರೆ ಈ ಜನ್ಮ ಯಾವಾಗ ಕೊನೆಗೊಳ್ಳುತ್ತದೆಯೋ ಗೊತ್ತಿಲ್ಲ. ಹುಟ್ಟುವಾಗ ಹೆಸರು ಇರುವುದಿಲ್ಲ. ಮನುಷ್ಯ ಒಳ್ಳೆಯ ಕೆಲಸಗಳನ್ನು ಮಾಡಿದರೆ ಅವರ ಹೆಸರು ಅಚ್ಚ ಹಸಿರಾಗಿ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ನಾವೆಲ್ಲಾ ಒಂದು ಎಂದು ಪ್ರೇರೇಪಿಸುವ ದಿಕ್ಸೂಚಿ ಆಗುವ, ಸರ್ವೋದಯ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಆಗುವುದು ಧರ್ಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಉದ್ದೇಶವೂ ಆಗಿದೆ. ಧರ್ಮ ಸೂಜಿ ಇದ್ದಂತೆ. ಜಾತಿ ಕತ್ತರಿ ಇದ್ದಂತೆ. ಹರಿದ ಬಟ್ಟೆಗಳನ್ನು ಜೋಡಿಸುವಂತೆ ಧರ್ಮವು ವಿವಿಧ ಜಾತಿ, ಜನಾಂಗಗಳನ್ನು ಜೋಡಿಸುವ ಕೆಲಸ ಮಾಡುತ್ತದೆಎಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ಅಮಿನ್ ಪಟೇಲ್, ಐಆರ್‍ಎಸ್ ಹಿರಿಯ ಅಧಿಕಾರಿ ಸಯ್ಯದ್ ನಾಸೀರ್ ಅಲಿ, ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ, ಸೆಂಟ್ ಜೋಸೆಫ್ ಕಾಲೇಜಿನ ಪ್ರಾಂಶುಪಾಲ ಡಾ.ವಿಕ್ಟರ್ ಲೋಬೋ, ಮಾಜಿ ಸಚಿವ ರೋಶನ್ ಬೇಗ್, ಶಾಸಕ ಎನ್.ಎ. ಹಾರಿಸ್, ಮಾಜಿ ಶಾಸಕ ಹಸನ್ ಅಹ್ಮದ್, ಮೌಲಾನ ಸೆಯ್ಯದ್ ಮುಹಮ್ಮದ್ ಇಬ್ರಾಹಿಂ, ಮೌಲಾನ ಮುಹಮ್ಮದ್ ಅಸದ್ ಅಮ್ರಿ, ಡಾ.ಝಕ್ರಿಯಾ ಅಬ್ಬಾಸ್, ಸೈಯದ್ ರಝಿ ಸೇರಿದಂತೆ ಪ್ರಮುಖರಿದ್ದರು.