ಅರ್ಹತೆ ಇಲ್ಲದಿದ್ದರೂ ವೈದ್ಯಕೀಯ ಸೇವೆ ಸಲ್ಲಿಸುವವರಿಗೆ ಕಡಿವಾಣ ಹಾಕಬೇಕು: ಹೈಕೋರ್ಟ್

Update: 2024-01-01 16:36 GMT

ಬೆಂಗಳೂರು: ಅರ್ಹತೆ ಇಲ್ಲದಿದ್ದರೂ ವೈದ್ಯರು ಎಂದು ಹೇಳಿಕೊಂಡು ಹಲವು ವರ್ಷಗಳ ಕಾಲ ಗ್ರಾಮೀಣ ಪ್ರದೇಶಗಳ ಜನರನ್ನು ವಂಚಿಸುತ್ತಿರುವವರಿಗೆ ಅಂತ್ಯ ಹಾಡಬೇಕಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪ್ಯಾರಾ ಮೆಡಿಕಲ್ ಅಧ್ಯಯನ ನಡೆಸಿ ಖಾಸಗಿಯಾಗಿ ವೈದ್ಯಕೀಯ ಸೇವೆ ಮುಂದುವರೆಸಲು ಪರವಾನಿಗೆ ನೀಡದ ಸರಕಾರದ ಕ್ರಮವನ್ನು ಎತ್ತಿಹಿಡಿದಿದೆ.

ಕ್ಲಿನಿಕ್ ನಡೆಸುವುದಕ್ಕೆ ಅನುಮತಿ ನಿರಾಕರಿಸಿ ಹಿಂಬರಹ ನೀಡಿದ್ದ ಜಿಲ್ಲಾ ಸಕ್ಷಮ ಪ್ರಾಧಿಕಾರದ ಕ್ರಮವನ್ನು ಪ್ರಶ್ನಿಸಿ ಕೋಲಾರ ಜಿಲ್ಲೆಯ ಕೆಜಿಎಫ್ ಮೂಲದ ಅಣ್ಣಯ್ಯ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.

ಅಲ್ಲದೆ, ಅಗತ್ಯ ಔಷಧಗಳೊಂದಿಗೆ ಸಮುದಾಯ ವೈದ್ಯಕೀಯ ಸೇವೆಯಲ್ಲಿ (ಸಿಎಂಎಸ್-ಇಡಿ) ಡಿಪ್ಲೊಮಾ ಪಡೆದವರನ್ನು ವೈದ್ಯರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಅರ್ಜಿದಾರರು ಸೊಸೈಟಿ ಕಾಯಿದೆಯಡಿ ನೋಂದಣಿಯಾಗಿರುವ ಕಾನ್ಪುರದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕೋ ಟೆಕ್ನಿಕಲ್ಸ್ ಅಂಡ್ ಹೆಲ್ತ್ ಕೇರ್ ನಲ್ಲಿ ಸಿಎಂಎಸ್-ಇಡಿ ಕೋರ್ಸ್ ಪಡೆದುಕೊಂಡಿದ್ದಾರೆ. ಇದೊಂದು ಪ್ಯಾರಾ ಮೆಡಿಕಲ್ ಕೋರ್ಸ್ ಆಗಿದೆ. ಅವರು ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿ‌ಷ್ ಮೆಂಟ್ ಕಾಯಿದೆ(ಕೆಪಿಎಂಎ) ಸೆಕ್ಷನ್ 2(ಕೆ) ಪ್ರಕಾರ ಹೋಮಿಯೋಪತಿ ವೈದ್ಯರ ಕಾಯ್ದೆ, ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಸಿದ್ಧ, ಯುನಾನಿ ಅಥವಾ ಯೋಗಾಭ್ಯಾಸಗಾರರು ಮತ್ತು ವೈದ್ಯಕೀಯ ನೋಂದಣಿ ಕಾಯ್ದೆ, ಭಾರತೀಯ ವೈದ್ಯಕೀಯ ಕೇಂದ್ರ ಮಂಡಳಿ ಕಾಯ್ದೆ, ಹೋಮಿಯೋಪತಿ ಕೇಂದ್ರ ಮಂಡಳಿ ಕಾಯ್ದೆ ಮತ್ತು ವೈದ್ಯಕೀಯ ಮಂಡಳಿ ಕಾಯ್ದೆ, 1956ರ ಅಡಿಯಲ್ಲಿ ನೋಂದಾಯಿಸಿರುವ ವ್ಯಕ್ತಿಗಳನ್ನು ವೈದ್ಯರು ಎಂದು ಕರೆಯಲಾಗುತ್ತದೆ.

ಆದರೆ, ಅರ್ಜಿದಾರರು ನೋಂದಣಿಯಾಗಿಲ್ಲ. ಹೀಗಾಗಿ, ಖಾಸಗಿ ವೈದ್ಯರಾಗಿ ಸೇವೆ ಸಲ್ಲಿಸುವುದಕ್ಕೆ ಪರಿಗಣಿಸುವುದಕ್ಕೆ ಸಾಧ್ಯವಿಲ್ಲ ಎಂದು ಸರಕಾರ ತಿಳಿಸಿರುವುದು ಸಮಂಜಸವಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News