ಬೆಂಗಳೂರು | ಇಸ್ರೇಲ್- ಫೆಲೆಸ್ತೀನ್‍ನಲ್ಲಿ ಶಾಂತಿ ನೆಲೆಸಬೇಕೆಂದು ಆಗ್ರಹಿಸಿ ಎಡಪಕ್ಷಗಳಿಂದ ಧರಣಿ, ಹಲವರು ವಶಕ್ಕೆ!
ಬೆಂಗಳೂರು, ಅ.20: ಇಸ್ರೇಲ್ ಮತ್ತು ಫೆಲೆಸ್ತೀನ್‍ನಲ್ಲಿ ಶಾಂತಿ ನೆಲೆಸಬೇಕೆಂದು ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಶುಕ್ರವಾರ ಧರಣಿ ನಡೆಸಿದ ಎಡಪಕ್ಷಗಳ ನೂರಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
‘ಯುದ್ದ ಬೇಡ, ಶಾಂತಿ ಬೇಕು’ ಎಂಬ ಘೋಷವಾಕ್ಯದೊಂದಿಗೆ ಇಸ್ರೇಲ್ ಮತ್ತು ಫೆಲೆಸ್ತೀನ್‍ನಲ್ಲಿ ಶಾಂತಿ ನೆಲೆಸಲಿ ಎಂಬ ಆಗ್ರಹದೊಂದಿಗೆ ಸಿಪಿಎಂ, ಸಿಪಿಐ, ಸಿಪಿಐ(ಎಂಎಲ್) ಸೇರಿದಂತೆ ಎಡಪಕ್ಷಗಳ ಕಾರ್ಯಕರ್ತರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದು, ಅವರನ್ನು ಆಡುಗೋಡಿ ಪೊಲೀಸ್ ಠಾಣೆಯ ಬಯಲು ಜಾಗದಲ್ಲಿ ಇರಿಸಿದ್ದಾರೆ.
ಈ ವೇಳೆ ಪ್ರತಿಭಟನಾಕಾರರು ಆಡುಗೋಡಿ ಪೊಲೀಸ್ ಠಾಣೆಯ ಬಯಲು ಜಾಗದಲ್ಲೂ ಯುದ್ಧ ವಿರೋಧಿ ಕವಿತೆಗಳ ಮೂಲಕ ಆಕ್ರೋಶ ಹೊರಹಾಕಿದ್ದು, ಇಸ್ರೇಲ್ ಮತ್ತು ಫೆಲೆಸ್ತೀನ್‍ನಲ್ಲಿ ಶಾಂತಿ ನೆಲಸಲಿ ಎಂದು ಆಗ್ರಹಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್, ‘ಇಸ್ರೇಲ್ ದಶಕಗಳಿಂದ ಫೆಲೆಸ್ತೀನ್ ಜನರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಾ ಬಂದಿದೆ. ಫೆಲೆಸ್ತೀನ್‍ನ ನಾಗರಿಕರನ್ನು ನಿರ್ವಸತಿಕರನ್ನಾಗಿ ಮಾಡಿ ಇಂದು ಫೆಲೆಸ್ತೀನ್ ದೇಶವನ್ನು ಭೂಪಟದಿಂದ ಅಳಿಸಿ ಹಾಕಿದೆ. ಇಂತಹ ಸಂದರ್ಭದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿರುವ ಫೆಲೆಸ್ತೀನ್ ನಾಗರಿಕರು ಕೆಲವು ಪ್ರದೇಶಗಳಲ್ಲಿ ಗುಲಾಮರಾಗಿ ಬದುಕುವ ವಾತಾವರಣ ನಿರ್ಮಾಣವಾಗಿದೆ. ಹಮಾಸ್ ಎನ್ನುವ ಸಂಘಟನೆಯನ್ನು ಗುರಿಯಾಗಿಟ್ಟುಕೊಂಡು ಇಡೀ ಫೆಲೆಸ್ತೀನ್ ಜನಾಂಗದ ಮೇಲೆ ದಾಳಿ ಮಾಡುತ್ತಿರುವ ಇಸ್ರೇಲ್ ಪ್ರಭುತ್ವದ ನೀತಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ’ ಎಂದರು.
ಪ್ರತಿಭಟನೆಯಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ್, ಸಿಪಿಐ(ಎಂಎಲ್) ಮುಖಂಡ ಅಪ್ಪಣ್ಣ ಹಾಗೂ ಎಡಪಕ್ಷಗಳ ನಾಯಕರಾದ ಪ್ರತಾಪಸಿಂಹ, ಮಂಜುನಾಥ್, ದೇವಿ, ಕೆ.ಮಹಾಂತೇಶ್ ಹುಳ್ಳಿ ಉಮೇಶ್, ನವೀನ್ ಕುಮಾರ್, ಪ್ರಭಾ ಬೆಳವಂಗಲ, ಭೀಮನಗೌಡ ಸೇರಿದಂತೆ ವಿವಿಧ ಪಕ್ಷಗಳ ನೂರಾರು ಕಾರ್ಯಕರ್ತರಿದ್ದರು.