ಕೋಲಾರದಿಂದ ರಾಜಸ್ಥಾನಕ್ಕೆ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಟೊಮ್ಯಾಟೊ ನಾಪತ್ತೆ!
ಕೋಲಾರ, ಜು.31: ಟೊಮ್ಯಾಟೋ ಬೆಲೆ ಮತ್ತೆ ಏರಿಕೆಯಾಗಿರುವುದರ ನಡುವೆಯೇ ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ಸಾಗಿಸುತ್ತಿದ್ದ 21 ಲಕ್ಷ ರೂಪಾಯಿ ಮೌಲ್ಯದ 11 ಟನ್ ತರಕಾರಿ ನಾಪತ್ತೆಯಾಗಿದೆ.
ಈ ಬಗ್ಗೆ ವ್ಯಾಪಾರಿ ಮುನಿರೆಡ್ಡಿ ಎಂಬವರು ನೀಡಿದ ದೂರಿನಂತೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೆಂಕಟೇಶ್ವರ ಟ್ರೇಡರ್ಸ್ ಮುನಿರೆಡ್ಡಿ ಮತ್ತು ಎಜಿ ಟ್ರೇಡರ್ಸ್ ಅವರು ಜೈಪುರದ ಮೂವರು ವ್ಯಾಪಾರಿಗಳಿಗೆ ಟ್ರಕ್ನಲ್ಲಿ ತಲಾ 15 ಕೆಜಿ ಟೊಮ್ಯಾಟೊದಂತೆ 735 ಕ್ರೇಟ್ಗಳನ್ನು ಜು.27ರಂದು ಕಳುಹಿಸಿದ್ದಾರೆ. ಪ್ರತಿ ಕ್ರೇಟ್ ಟೊಮ್ಯಾಟೊವನ್ನು 2,000 ದಿಂದ 2,150 ರೂ.ಗೆ ಖರೀದಿಸಲಾಗಿದೆ.
ಟೊಮ್ಯಾಟೊ ಸಾಗಾಟದ ಟ್ರಕ್ ಚಾಲಕನ ಸಂಖ್ಯೆ, ವಾಹನ ನೋಂದಣಿ ಸಂಖ್ಯೆ ಮತ್ತು ಇತರ ವಿವರಗಳನ್ನು ಜೈಪುರ ವ್ಯಾಪಾರಿಗಳೊಂದಿಗೆ ಹಂಚಿಕೊಳ್ಳಲಾಗಿದ್ದು, ಜೈಪುರ ವ್ಯಾಪಾರಿಗಳು ನಿಯಮಿತವಾಗಿ ಸರಕುಗಳನ್ನು ಟ್ರ್ಯಾಕ್ ಮಾಡುತ್ತಿದ್ದರು. ಜು.29 ರಂದು ರಾತ್ರಿ 11 ಗಂಟೆಗೆ ಟ್ರಕ್ ಜೈಪುರ ತಲುಪಬೇಕಿತ್ತು. ಆದರೆ ಶನಿವಾರ ತಡರಾತ್ರಿಯಿಂದ ಚಾಲಕ ಸಂಪರ್ಕಕ್ಕೆ ಸಿಗುತ್ತಿಲ್ಲ. ಟ್ರಕ್ನಲ್ಲಿರುವ ಜಿಪಿಎಸ್ ಟ್ರ್ಯಾಕರ್ ಸಹ ಚಲನೆ ತೋರಿಸಲಿಲ್ಲ ಎಂದು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.