ಬೆಂಗಳೂರು| ಹಣ ಸುಲಿಗೆ ಮಾಡಿದ್ದ ಜಿಎಸ್‍ಟಿ ಅಧಿಕಾರಿಗಳ ಬಂಧನ ಪ್ರಕರಣ: ಹವಾಲಾ ಹಣ ಸ್ವೀಕರಿಸಿದ್ದ ಮತ್ತಿಬ್ಬರು ಸೆರೆ
ಬೆಂಗಳೂರು: ಉದ್ಯಮಿಯೊಬ್ಬರಿಗೆ ಬೆದರಿಸಿ ಹಣ ಸುಲಿಗೆ ಮಾಡಿದ್ದ ಪ್ರಕರಣದಡಿ ಜಿಎಸ್‍ಟಿ ಇಲಾಖೆಯ ನಾಲ್ವರು ಅಧಿಕಾರಿಗಳನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಪ್ರಕರಣದ ತನಿಖೆಯಲ್ಲಿ ಮತ್ತಿಬ್ಬರು ಖಾಸಗಿ ವ್ಯಕ್ತಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಮುಕೇಶ್ ಜೈನ್ ಹಾಗೂ ಪ್ರಕಾಶ್ ಜೈನ್ ಎಂಬುವರು ಬಂಧಿತರು ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಹವಾಲ ಹಣ ವರ್ಗಾವಣೆಯಾಗಿರುವುದನ್ನು ಪತ್ತೆ ಹಚ್ಚಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಸೆ.9ರಂದು ಉದ್ಯಮಿಯೊಬ್ಬರನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದ ಆರೋಪದಡಿ ನಾಲ್ವರು ಜಿಎಸ್‍ಟಿ ಅಧಿಕಾರಿಗಳನ್ನು ಸಿಸಿಬಿ ಪೊಲೀಸರು ಬಂಧಿಸಲಾಗಿತ್ತು. ಆರೋಪಿತ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿದಾಗ ಅವರಿಗೆ ಮುಕೇಶ್ ಜೈನ್ ಹಾಗೂ ಪ್ರಕಾಶ್ ಜೈನ್ ಎಂಬ ಇಬ್ಬರು ಆರೋಪಿಗಳು ಸಾಥ್ ನೀಡಿದ್ದರು ಎಂಬುದು ತಿಳಿದು ಬಂದಿತ್ತು. ಸದ್ಯ ಇಬ್ಬರೂ ಖಾಸಗಿ ವ್ಯಕ್ತಿಗಳನ್ನು ಬಂಧಿಸಿದ್ದು, ಅವರಿಂದ 69 ಲಕ್ಷ ರೂ. ನಗದು ಹಾಗೂ 306 ಗ್ರಾಂ ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಒಟ್ಟಾರೆ 93 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.