ಇಬ್ಬರು ಪತ್ನಿಯರು, ಪುತ್ರಿಯನ್ನು ಕೊಲೆ ಮಾಡಿದ ಪ್ರಕರಣ: ಆರೋಪಿಗೆ ಮರಣ ದಂಡನೆ ಬದಲು ಜೀವಾವಧಿ ಶಿಕ್ಷೆ
ಬೆಂಗಳೂರು, ಆ.30: ತನ್ನ ಇಬ್ಬರು ಪತ್ನಿಯರು ಹಾಗೂ ಪುತ್ರಿಯನ್ನು ಹತ್ಯೆ ಮಾಡಿ ಕಳೆದ 30 ವರ್ಷಗಳಿಂದ ಕಾರಾಗೃಹದಲ್ಲಿರುವ ಕಲಬುರಗಿ ಜಿಲ್ಲೆಯ ಅಫ್ಜಲ್‍ಪುರದ ಅಪರಾಧಿ ಸಾಯಿಬಣ್ಣನಿಗೆ ವಿಧಿಸಿದ್ದ ಮರಣ ದಂಡನೆಯನ್ನು ಕರ್ನಾಟಕ ಹೈಕೋರ್ಟ್ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದೆ.
ಮರಣ ದಂಡನೆ ಶಿಕ್ಷೆ ಪ್ರಶ್ನಿಸಿ ಸಾಯಿಬಣ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ, ಈ ತೀರ್ಪು ನೀಡಿದೆ. ಅಪರಾಧಿಗೆ 70 ವರ್ಷ ವಯಸ್ಸಾಗಿರುವ ಹಿನ್ನೆಲೆಯಲ್ಲಿ ಹೈಕೋರ್ಟ್, ಅಧೀನ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದೆ.
ರಾಷ್ಟ್ರಪತಿ ಸೇರಿ ನಾಲ್ಕು ಹಂತಗಳಲ್ಲಿ ಸಾಯಿಬಣ್ಣ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ಪರಿಗಣಿಸುವುದು 7 ವರ್ಷ 8 ತಿಂಗಳು ವಿಳಂಬವಾಗಿದೆ. ಆದರೆ, ಅದಕ್ಕೆ ಯಾವುದೇ ಕಾರಣ ನೀಡಿಲ್ಲ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಪರಾಧಿ ಸಾಯಿಬಣ್ಣ, ಬೆಳಗಾವಿಯ ಜೈಲಿನಲ್ಲಿ ಈಗಾಗಲೇ 16 ವರ್ಷ ಏಕಾಂಗಿ ಸೆರೆವಾಸ ಅನುಭವಿಸಿದ್ದಾನೆ. ಅಲ್ಲದೆ, ಅರ್ಜಿದಾರನು ಅನ್ಯಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ. ಏಕಾಂಗಿ ಸೆರೆವಾಸದಿಂದಾಗಿ ಆತನಿಗೆ ಹೀಗೆಲ್ಲಾ ಆಗುತ್ತಿರಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಕರಣವೇನು?: ಅನೈತಿಕ ಸಂಬಂಧ ಶಂಕೆ ವ್ಯಕ್ತಪಡಿಸಿ ಸಾಯಿಬಣ್ಣ 1988ರ ಜ. 9ರಂದು ಪತ್ನಿ ಮಾಲಕವ್ವಳನ್ನು ಕೊಲೆ ಮಾಡಿ ತಾನೇ ಬಂದು ಪೆÇಲೀಸರಿಗೆ ಶರಣಾಗಿದ್ದ. ಆನಂತರ ಜೈಲಿನಲ್ಲಿರುವಾಗ ಸಹಖೈದಿ ದತ್ತು ಎಂಬಾತನೊಂದಿಗೆ ಆತನ ಸ್ನೇಹ ಬೆಳೆಯಿತು. ಜಾಮೀನು ಪಡೆದು ಸಹಖೈದಿ ದತ್ತುವಿನ ಪುತ್ರಿ ನಾಗಮ್ಮಗಳನ್ನು ವಿವಾಹವಾಗಿದ್ದನು. 2ನೇ ಪತ್ನಿ ನಾಗಮ್ಮಳಿಗೆ ವಿಜಯಲಕ್ಷ್ಮೀ ಎಂಬ ಮಗು ಜನಿಸಿತ್ತು.
ಈ ಮಧ್ಯೆ, ಮೊದಲ ಪತ್ನಿ ಕೊಲೆ ಕೇಸಿನಲ್ಲಿ ಸಾಯಿಬಣ್ಣನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 1994ರಲ್ಲಿ ಪೆರೋಲ್ ಪಡೆದು ಹೊರಬಂದಿದ್ದ ಸಾಯಿಬಣ್ಣ 2ನೇ ಪತ್ನಿ ಹಾಗೂ ಮಗುವನ್ನು ಕೊಲೆ ಮಾಡಿ ಮತ್ತೆ ಜೈಲು ಸೇರಿದ್ದನು. ಈ ಹಿನ್ನೆಲೆಯಲ್ಲಿ ಕಲಬುರಗಿ ಸತ್ರ ನ್ಯಾಯಾಲಯವು ಸಾಯಿಬಣ್ಣನಿಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿತ್ತು.
ನಂತರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕೂಡ ಆ ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಆದರೆ, ಆತ ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ 7 ವರ್ಷ 8 ತಿಂಗಳು ವಿಳಂಬವಾಗಿರುವುದರಿಂದ ಮರಣ ದಂಡನೆ ಶಿಕ್ಷೆಯಿಂದ ವಿನಾಯಿತಿ ನೀಡುವಂತೆ ಹೈಕೋರ್ಟ್ ಮೊರೆ ಹೋಗಿದ್ದನು.