ವಿವಸ್ತ್ರಗೊಳಿಸಿ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಆರೋಪಿಗಳನ್ನು ಮೃಗಗಳು, ದುಶ್ಯಾಸನರು ಎಂದ ಹೈಕೋರ್ಟ್
ಬೆಂಗಳೂರು: ಬೆಳಗಾವಿ ತಾಲೂಕಿನ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣ ಸಂಬಂಧ ರಾಜ್ಯ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಇಂದಿನ ಆಧುನಿಕ ಯುಗದಲ್ಲಿ ದುಶ್ಯಾಸನರೇ ತುಂಬಿದ್ದಾರೆ. ಯಾವ ಶ್ರೀಕೃಷ್ಣನೂ ಆಕೆಯ ನೆರವಿಗೆ ಬರಲಿಲ್ಲ ಎಂಬ ಮಾತುಗಳನ್ನಾಡಿದೆ.
ಈ ಸಂಬಂಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಕರ್ನಾಟಕ ಹೈಕೋರ್ಟ್, ಸ್ವಾತಂತ್ರ್ಯಾನಂತರವೂ ಇಂಥ ಘಟನೆ ನಡೆದಿರುವುದಕ್ಕೆ ನಾಚಿಕೆಯಿಂದ ತಲೆತಗ್ಗಿಸಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಬೆಳಗಾವಿಯಲ್ಲಿ ಯುವಕನೊಬ್ಬ ತಾನು ಪ್ರೇಮಿಸಿದ್ದ ಯುವತಿಯ ಜೊತೆ ಪರಾರಿಯಾಗಿದ್ದ. ಇದರಿಂದ ಆಕ್ರೋಶಗೊಂಡ ಯುವತಿ ಸಂಬಂಧಿಕರು ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ, ಆಕೆಯನ್ನು ಸಾರ್ವಜನಿಕವಾಗಿ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದರು. ಈ ಪ್ರಕರಣ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು.
ಈ ಘಟನೆ ಕುರಿತು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಹೈಕೋರ್ಟ್, ಮಹಾಭಾರತದ ಉದಾಹರಣೆ ನೀಡಿತು. ಮಹಾಭಾರತದಲ್ಲಿ ದ್ರೌಪದಿ ವಸ್ತ್ರಾಪಹರಣ ಮಾಡಲು ದುಶ್ಯಾಸನ ಸೇರಿದಂತೆ ಆತನ ಸಹೋದರರು ಮುಂದಾದಾಗ ಶ್ರೀಕೃಷ್ಣ ದ್ರೌಪದಿಯ ಮಾನ ರಕ್ಷಣೆ ಮಾಡಿದ. ಆದರೆ, ಇದು ದ್ವಾಪರ ಯುಗದ ಕಥೆ. ಇಂದಿನ ಕಲಿಯುಗದಲ್ಲಿ ದುರ್ಯೋಧನ ಹಾಗೂ ದುಶ್ಯಾಸನರೇ ತುಂಬಿದ್ದಾರೆ ಎಂದು ಹೈಕೋರ್ಟ್ ನ್ಯಾಯ ಪೀಠ ಹೇಳಿತು.
ಮಹಿಳೆ ದೈಹಿಕವಾಗಿ ಘಾಸಿಗೊಂಡಿರುವ ಜೊತೆಯಲ್ಲೇ ಮಾನಸಿಕವಾಗಿಯೂ ಆಘಾತಗೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಸತತ 2 ಗಂಟೆ ಕಾಲ ಮಹಿಳೆಗೆ ಥಳಿಸಲಾಗಿದೆ. ಈ ಪ್ರಕರಣದ ಆರೋಪಿಗಳು ಮೃಗಗಳಾಗಿದ್ದು, ಅವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿತು. ಆರೋಪಿಗಳನ್ನು ಮಾನವರು ಎಂದೇ ಪರಿಗಣಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ ನ್ಯಾಯಪೀಠ, ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಪಿ.ಬಿ.ವರಾಳೆ ಹಾಗೂ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಿತ್ತು.
ಮಹಿಳೆಯರು ಇಂದಿನ ದಿನಗಳಲ್ಲಿ ಸುರಕ್ಷತೆಯ ಕೊರತೆ ಎದುರಿಸುತ್ತಿದ್ದಾರೆ ಎಂದ ನ್ಯಾಯಪೀಠ, ಮಹಿಳೆಯು ಪುರುಷನಿಗೆ ಜನ್ಮ ನೀಡುತ್ತಾಳೆ. ಅದರೆ ಪುರುಷರು ಮಹಿಳೆಯನ್ನು ತಮ್ಮ ಭೋಗದ ವಸ್ತುಗಳನ್ನಾಗಿ ಮಾಡಿಕೊಳ್ಳುತ್ತಾರೆ ಎಂಬ ಸಹೀರ್ ಲೂಧಿಯಾನ್ವಿ ಅವರ ಪ್ರಖ್ಯಾತ ಹಿಂದಿ ಕವನದ ಸಾಲುಗಳನ್ನೂ ನೆನಪಿಸಿದೆ.
ಅಂತಿಮವಾಗಿ ಪೀಠವು ರಾಜ್ಯ ಸರಕಾರ ಸಲ್ಲಿಸಿರುವ ಸ್ಥಿತಿಗತಿ ವರದಿ ತೃಪ್ತಿ ತಂದಿಲ್ಲ. ವರದಿಯಲ್ಲಿ ಸಂತ್ರಸ್ತ ಮಹಿಳೆಗೆ ಮನೋವೈಜ್ಞಾನಿಕ ಕೌನ್ಸೆಲಿಂಗ್, ಆಕೆಗೆ ಚಿಕಿತ್ಸೆ ನೀಡಿರುವುದು, ಗಾಯದ ಮಾಹಿತಿ ನೀಡಲಾಗಿಲ್ಲ ಎಂದಿತು.
ಆಗ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು, ಅಫಿಡವಿಟ್‍ನಲ್ಲಿ ಹೆಚ್ಚುವರಿ ಮಾಹಿತಿಯನ್ನು ಸಲ್ಲಿಸಲಾಗುವುದು ಎಂದರು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಸ್ಥಿತಿಗತಿ ವರದಿ ಸಲ್ಲಿಸಲು ರಾಜ್ಯ ಸರಕಾರಕ್ಕೆ ಸೋಮವಾರದವರೆಗೆ ಕಾಲಾವಕಾಶ ನೀಡಲಾಗಿದೆ. ಪ್ರಕರಣದ ತನಿಖೆಯನ್ನು ಎಸಿಪಿಗೆ ವಹಿಸಲಾಗಿದೆ. ಅವರೂ ನ್ಯಾಯಾಲಯದಲ್ಲಿ ಹಾಜರಿದ್ದಾರೆ. ಮುಂದಿನ ವಿಚಾರಣೆ ವೇಳೆಗೆ ಎಸಿಪಿ ಜೊತೆಗೆ ಬೆಳಗಾವಿ ಪೊಲೀಸ್ ಆಯುಕ್ತರು ವಿಚಾರಣೆಗೆ ಹಾಜರಾಗಬೇಕು ಎಂದು ಆದೇಶಿಸಿದೆ.