‘ಗ್ಯಾರಂಟಿ’ ಉಳಿತಾಯದ ಹಣ ಶಿಕ್ಷಣಕ್ಕೆ ಬಳಸಿ: ಸಚಿವ ಕೃಷ್ಣಭೈರೇಗೌಡ ಸಲಹೆ

Update: 2023-07-23 12:38 GMT

ಬೆಂಗಳೂರು, ಜು. 23: ‘ನೈಸ್ ಸರಕಾರ ಐದು ಗ್ಯಾರಂಟಿಗಳಿಂದ ಬಂದ ಹಣ ಉಳಿಸುವ ಪೋಷಕರು, ತಮ್ಮ ಮಕ್ಕಳ ಶಿಕ್ಷಣಕ್ಕೆ ವ್ಯಯಿಸಬೇಕು’ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

ರವಿವಾರ ಕುವೆಂಪುನಗರ ವಾರ್ಡ್‍ನಲ್ಲಿ ‘ನಮ್ಮೂರ ಹೆಮ್ಮೆ-2023’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಮಾತು ನೀಡಿತ್ತು. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದೆವು. ಇದೀಗ ನಮ್ಮ ಸರಕಾರ ಅಧಿಕಾರಕ್ಕೆ ಬಂದು ಕೇವಲ ಎರಡೇ ತಿಂಗಳಲ್ಲಿ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ ಎಂದರು.

ಈ ಗ್ಯಾರಂಟಿಗಳಿಂದ ಬಡ-ಮಧ್ಯಮ ಕುಟುಂಬವೊಂದಕ್ಕೆ ತಿಂಗಳಿಗೆ ಕನಿಷ್ಠ 5 ರಿಂದ 6 ಸಾವಿರ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣದ ಪೈಕಿ ಕನಿಷ್ಠ ಶೇ.50ರಷ್ಟು ಹಣವನ್ನು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಿ ಎಂದು ಪೋಷಕರಿಗೆ ಸಚಿವರು ಸಲಹೆ ನೀಡಿದರು.

ಗ್ಯಾರಂಟಿ ಯೋಜನೆಗಳಿಂದ ಜನ ಖುಷಿಯಾಗಿದ್ದಾರೆ ಎಂದ ಅವರು, ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ನಂತರ ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಬಡ-ಮಧ್ಯಮ ವರ್ಗದ ಜನ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅವರ ಸಂಕಷ್ಟಕ್ಕೆ ಸಹಾಯಹಸ್ತ ಚಾಚುವ ಕೆಲಸಕ್ಕೆ ಮುಂದಾಯಿತು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News