ರಾಜ್ಯಾಧ್ಯಕ್ಷ ಸ್ಥಾನ ನೀಡದಿದ್ದರೆ ಕಾರ್ಯಕರ್ತರ ಜತೆ ಚರ್ಚಿಸಿ ಮುಂದಿನ ನಿರ್ಧಾರ: ಬಿಜೆಪಿ ನಾಯಕ ವಿ. ಸೋಮಣ್ಣ
ಬೆಂಗಳೂರು: ‘ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಮಾನ ನೀಡದಿದ್ದರೆ ನನ್ನ ಬೆಂಬಲಿಗರ ಜತೆ ಚರ್ಚಿಸಿ, ಅವರ ಅಭಿಪ್ರಾಯವನ್ನು ಆಧರಿಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇನೆ’ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ರವಿವಾರ ಇಲ್ಲಿನ ವಿಜಯ ನಗರದಲ್ಲಿನ ತನ್ನ ಕಚೇರಿಯಲ್ಲಿ ಗೋವಿಂದರಾಜ ನಗರ ವಾರ್ಡ್‍ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ನನಗೆ 365 ದಿನವೂ ಜನರ ನಡುವೆ ಇದ್ದು, ಜನ ಸಂಘಟನೆ ಮಾಡಿದ ಅನುಭವವಿದೆ. ಆದುದರಿಂದ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಎಂದು ಮನವಿ ಮಾಡಿದ್ದೇನೆ" ಎಂದು ತಿಳಿಸಿದರು.
"ನವಲತ್ತು ವರ್ಷಗಳಿಂದ ರಾಜ್ಯ ರಾಜಕಾರಣದ ಆಗು-ಹೋಗುಗಳನ್ನು ನಾನು ಬಲ್ಲೆ. ಪಕ್ಷ ನನಗೆ ರಾಜ್ಯಾಧ್ಯಕ್ಷ ಸ್ಥಾನವನ್ನು ಕೊಟ್ಟರೆ ಹಗಲಿರುಳು ಪಕ್ಷಕ್ಕಾಗಿ ಶ್ರಮಿಸುತ್ತೇನೆ. ನನಗೆ ಸೂಕ್ತ ಸ್ಥಾನಮಾನ ಕೊಡದೇ ಹೋದರೆ ಕಾರ್ಯಕರ್ತರ ಸಭೆ ಕರೆದು ಮುಂದಿನ ತೀರ್ಮಾನ ಪ್ರಕಟ ಮಾಡುತ್ತೇನೆ" ಎಂದು ಸೋಮಣ್ಣ ಇದೇ ವೇಳೆ ಸ್ಪಷ್ಟಪಡಿಸಿದರು.
‘ಗೋವಿಂದರಾಜ ನಗರ ಕ್ಷೇತ್ರವನ್ನು ಮೂಲಭೂತ ಸೌಲಭ್ಯ ಕಲ್ಪಿಸುವ ಮೂಲಕ ರಾಜ್ಯದ ಮಾದರಿ ಕ್ಷೇತ್ರವನ್ನಾಗಿ ಮಾಡಿದೆ. ಬಿಜೆಪಿ ಹೈಕಮಾಂಡ್ ಮಾತಿಗೆ ಗೌರವ ನೀಡಿ ಚುನಾವಣೆಯಲ್ಲಿ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸುಲಭವಾಗಿತ್ತು. ಚುನಾವಣೆಯಲ್ಲಿ ಸೋಲಿಗೆ ಪಕ್ಷದಲ್ಲಿರುವ ಅಸಮಾಧಾನವೇ ಕಾರಣವಾಯಿತು’ ಎಂದು ಅವರು ತಿಳಿಸಿದರು.