ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಪ್ರಕರಣ: ಬಿ.ನಾಗೇಂದ್ರ ಆರು ದಿನ ಈಡಿ ಕಸ್ಟಡಿಗೆ
ಬೆಂಗಳೂರು : ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಜುಲೈ 18ರವರೆಗೆ ಜಾರಿ ನಿರ್ದೇಶನಾಲಯ(ಈ.ಡಿ.)ದ ಅಧಿಕಾರಿಗಳ ವಶಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಶುಕ್ರವಾರ ಬೆಳಗ್ಗೆ ನಗರದ ಡಾಲರ್ಸ್ ಕಾಲೊನಿಯಲ್ಲಿರುವ ಬಿ.ನಾಗೇಂದ್ರ ಅವರ ನಿವಾಸದಿಂದ ಅವರನ್ನು ವಶಕ್ಕೆ ಪಡೆದಿದ್ದ ಈ.ಡಿ. ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಶುಕ್ರವಾರ ರಾತ್ರಿಯವರೆಗೂ ಬಿ.ನಾಗೇಂದ್ರ ಅವರನ್ನು ಕಚೇರಿಯಲ್ಲಿರಿಸಿಕೊಂಡ ಅಧಿಕಾರಿಗಳು ಶನಿವಾರ ಮುಂಜಾನೆ ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ನಂತರ ಸಂಪಿಗೆಹಳ್ಳಿಯಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ಈ ವೇಳೆ, ಹೆಚ್ಚಿನ ವಿಚಾರಣೆಗಾಗಿ ಬಿ.ನಾಗೇಂದ್ರ ಅವರನ್ನು 14 ದಿನಗಳ ಕಾಲ ವಶಕ್ಕೆ ನೀಡುವಂತೆ ಈ.ಡಿ. ಅಧಿಕಾರಿಗಳು ಮನವಿ ಸಲ್ಲಿಸಿದರು. ಆದರೆ, ನ್ಯಾಯಾಧೀಶರು ಜುಲೈ 18ರವರೆಗೆ ಬಿ.ನಾಗೇಂದ್ರ ಅವರನ್ನು ಈ.ಡಿ. ವಶಕ್ಕೆ ನೀಡಿ ಆದೇಶಿಸಿದ್ದಾರೆ.
ಇದೇ ಸಮಯದಲ್ಲಿ ಬಿ.ನಾಗೇಂದ್ರ ಅವರು ತಮಗೆ ಬಿಪಿ, ಆಯಾಸವಿದೆ ಎಂದು ಆರೋಗ್ಯದ ಸಮಸ್ಯೆ ಬಗ್ಗೆ ನ್ಯಾಯಾಧೀಶರ ಮುಂದೆ ಹೇಳಿಕೊಂಡರು. ಅದಕ್ಕೆ ಅವರಿಗೆ ಪ್ರತಿದಿನ ವೈದ್ಯಕೀಯ ತಪಾಸಣೆಗೊಳಪಡಿಸಬೇಕು ಎಂದು ಈ.ಡಿ. ಅಧಿಕಾರಿಗಳಿಗೆ ನ್ಯಾಯಾಧೀಶರು ನಿರ್ದೇಶನ ನೀಡಿದರು.
ನಿಗಮದ ಅಕ್ರಮಕ್ಕೂ ನನಗೂ ಸಂಬಂಧವಿಲ್ಲ: ಈ.ಡಿ. ವಶಕ್ಕೆ ಪಡೆದ ಬಳಿಕ ಶಾಂತಿನಗರದ ಕಚೇರಿ ಬಳಿ ಕರೆತಂದಾಗ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ಬಿ.ನಾಗೇಂದ್ರ, ವಾಲ್ಮೀಕಿ ನಿಗಮದ ಅಕ್ರಮಕ್ಕೂ ನನಗೂ ಸಂಬಂಧವಿಲ್ಲ. ನಿಗಮದಲ್ಲಿನ ಅಕ್ರಮದಲ್ಲಿ ನನ್ನ ಪಾತ್ರವಿಲ್ಲ ಎಂದು ಪ್ರತಿಕ್ರಿಯಿಸಿದರು.
ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ನಿಗಮದ ಅಧ್ಯಕ್ಷ, ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರನ್ನು ಜು.15ರ ಸೋಮವಾರ ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಎಸ್‍ಐಟಿ ಸೂಚಿಸಿದೆ. ಪ್ರಕರಣದ ತನಿಖೆ ಆರಂಭಿಸಿರುವ ಈ.ಡಿ. ಅಧಿಕಾರಿಗಳು ಈಗಾಗಲೇ ಬಸವನಗೌಡ ದದ್ದಲ್ ಅವರ ನಿವಾಸಗಳಲ್ಲಿ ಶೋಧ ನಡೆಸಿದ್ದಾರೆ.