ಪಕ್ಷಾಂತರ ಕಾಯ್ದೆ ಉಲ್ಲಂಘನೆ: ಲಿಂಗಸುಗೂರು ಪುರಸಭೆಯ ಕಾಂಗ್ರೆಸ್ ಸದಸ್ಯರ ಸದಸ್ಯತ್ವ ರದ್ದು

Update: 2023-09-05 06:15 GMT

ರಾಯಚೂರು:  ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಲಿಂಗಸುಗೂರು ಪುರಸಭೆಗೆ ಆಯ್ಕೆಯಾಗಿದ್ದ ಸದಸ್ಯರು 2023ರ ವಿಧಾನಸಭಾ ಚುನಾವಣೆ ವೇಳೆ ಪಕ್ಷ ತೊರೆದು ʼಕಲ್ಯಾಣ ರಾಜ್ಯ ಪ್ರಗತಿ ಪಕ್ಷʼ (KRPP) ಸೇರಿ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದ ಆರೋಪದ ಮೇಲೆ ನಾಲ್ವರು ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಆದೇಶ ಹೊರಡಿಸಿದ್ದಾರೆ.

ಆರೋಪ ಸಾಬೀತು ಆಗಿರುವ ಹಿನ್ನೆಲೆಯಲ್ಲಿ ನಾಲ್ವರು ಸದಸ್ಯರಾದ  ಫಾತಿಮಾ, ಮೌಲಾಸಾಬ್, ಎ.ಪ್ರಮೋದ್ ಕುಮಾರ್, ಶರಣಪ್ಪ ಅವರ ಲಿಂಗಸುಗೂರು ಪುರಸಭೆ ಸದಸ್ಯತ್ವವನ್ನು ಅನರ್ಹಗೊಳಿಸಿ ಜಿಲ್ಲಾ‌ ದಂಡಾಧಿಕಾರಿಗಳ ನ್ಯಾಯಾಲಯ ತೀರ್ಪು ನೀಡಿದೆ. 

ಪಕ್ಷಾಂತರ ಕಾಯ್ದೆ ಉಲ್ಲಂಘನೆ ಬಗ್ಗೆ ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ 2023 ಜೂನ್ 2ರಂದು ಜಿಲ್ಲಾಧಿಕಾರಿಗೆ ದಾಖಲೆಗಳ ಸಹಿತ ದೂರು ಕೊಟ್ಟಿದ್ದರು. ದೂರುಗಳಿಗೆ ಸಂಬಂಧಿಸಿ ಸಮರ್ಥನೀಯವಾದ ಉತ್ತರ ನೀಡಲು ಪುರಸಭೆ ಸದಸ್ಯರಿಗೆ ನೋಟಿಸ್ ನೀಡಿ ಅವಕಾಶ ನೀಡಲಾಗಿತ್ತು. ಆದರೆ, ಸದಸ್ಯರು ಜಿಲ್ಲಾಧಿಕಾರಿ ನೋಟಿಸ್‌ಗೆ ಸಮರ್ಥ ಉತ್ತರ ನೀಡುವಲ್ಲಿ ವಿಫಲವಾಗಿದ್ದರು. ಈ ಹಿನ್ನೆಲೆಯಲ್ಲಿ ನಾಲ್ವರು ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಸ್ಥಳೀಯ ಪ್ರಧಿಕಾರಗಳ (ಪಕ್ಷಾಂತರ ನಿಷೇಧ) ಕಾಯ್ದೆ 1987ರ ನಿಯಮದಡಿ ಲಿಂಗಸುಗೂರು ಪುರಸಭೆಯ ನಾಲ್ವರ ಸದಸ್ಯರ ಉಳಿದ ಅವಧಿಯ ಸದಸ್ಯತ್ವ ಅನರ್ಹಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News