ಶಿಸ್ತು ಉಲ್ಲಂಘನೆ ಆರೋಪ: ಶಿವಮೊಗ್ಗ ಕಾಂಗ್ರೆಸ್ ನಾಯಕ ಹೆಚ್.ಸಿ ಯೋಗೇಶ್ ಗೆ ಪಕ್ಷದಿಂದ ಶೋಕಾಸ್ ನೋಟಿಸ್
ಶಿವಮೊಗ್ಗ: ಪಕ್ಷದಲ್ಲಿ ಶಿಸ್ತು ಉಲ್ಲಂಘನೆ ಆರೋಪದ ಮೇಲೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ, ಮಹಾನಗರಪಾಲಿಕೆ ಸದಸ್ಯ ಹೆಚ್. ಸಿ ಯೋಗೀಶ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಶೋಕಾಸ್ ನೋಟೀಸ್ ಜಾರಿಗೊಳಿಸಿದ್ದಾರೆ.
ಹೆಚ್.ಸಿ ಯೋಗೇಶ್ ಅವರ ವಿರೋಧವನ್ನು ಲೆಕ್ಕಿಸದೆ ಕಾಂಗ್ರೆಸ್ ವರಿಷ್ಠರು ಆಯನೂರುಮಂಜುನಾಥ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದರು. ಪಕ್ಷ ಸೇರ್ಪಡೆಗೊಂಡ ನಂತರ ಮೊದಲ ಬಾರಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದ ಆಯನೂರು ಮಂಜುನಾಥ್ ಅವರನ್ನು ಎಚ್ ಸಿ ಯೋಗೀಶ್ ದೈಹಿಕವಾಗಿ ತಳ್ಳಿದ್ದಲ್ಲದೆ. ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರ ಪತ್ರಿಕಾ ಗೋಷ್ಟಿ ಸಂದರ್ಭದಲ್ಲೂ ಹಿರಿಯ ನಾಯಕರಾದ ಆಯನೂರುಮಂಜುನಾಥ್ ಅವರಿಗೆ ಆಸನ ಸಿಗದಂತೆ ಮಾಡಿ ಅವಮಾನ ಮಾಡಿದ್ದಾರೆ ಎಂದು ಮಾಜಿ ವಿಧಾನಪರಿಷತ್ ಸದಸ್ಯರಾದ ಆರ್. ಪ್ರಸನ್ನಕುಮಾರ್, ಮಾಜಿ ಮೇಯರ್ ಎಸ್ ಕೆ ಮರಿಯಪ್ಪ ನೇತೃತ್ವದ ೨೦ಕ್ಕೂ ಹೆಚ್ಚಿನ ಕಾಂಗ್ರೆಸ್ ಪದಾಧಿಕಾರಿಗಳು ಜಿಲ್ಲಾ ಕಾಂಗ್ರೆಸ್ ಮತ್ತು ಕೆಪಿಸಿಸಿಗೆ ಲಿಖಿತ ದೂರು ನೀಡಿದ್ದಾರೆ.
ಪಕ್ಷದಲ್ಲಿ ಹೆಚ್.ಸಿ ಯೋಗೇಶ್ ಸರ್ವಾಧಿಕಾರಿ ಧೋರಣೆ, ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ,ಪಕ್ಷದ ವರಿಷ್ಟರ ತೀರ್ಮಾನಕ್ಕೆ ವಿರೋಧ ಹಾಗೂ ಆಯನೂರು ಮಂಜುನಾಥ್ ಸೇರ್ಪಡೆಗೆ ವಿರೋಧಿಸಿ ಮುಖ್ಯಮಂತ್ರಿ ನಿವಾಸದ ಎದುರು ಧರಣಿ ಮತ್ತು ಪಕ್ಷದ ತೀರ್ಮಾನದ ವಿರುದ್ದ ಪಕ್ಷದ ಗಮನಕ್ಕೆ ತರದೆ ಪತ್ರಿಕಾಗೋಷ್ಟಿ ನಡೆಸುವುದು ಸೇರಿದಂತೆ ಆರೋಪದ ಪಟ್ಟಿಗಳನ್ನು ಪಟ್ಟಿ ಮಾಡಿ ಕೆಪಿಸಿಸಿ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು,ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ದೂರು ನೀಡಲಾಗಿತ್ತು.
ವಿಧಾನಸಭೆ,ಲೋಕಸಭೆ,ರಾಜ್ಯ ಸಭೆ,ವಿಧಾನ ಪರಿಷತ್ ಸೇರಿದಂತೆ ನಾಲ್ಕೂ ಸದನಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಯ ನಾಯಕರಾದ ಆಯನೂರು ಮಂಜುನಾಥ್ ಅವರ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕೆ ಶಕ್ತಿ ಬಂದಂತಾಗಿದೆ. ರಾಜ್ಯದಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವ ಈ ಹಿನ್ನಲೆಯಲ್ಲೇ ಪಕ್ಷದ ಕರ್ನಾಟಕ ಉಸ್ತುವಾರಿ ರಣಧೀಪ್ ಸುರ್ಜಿವಾಲಾ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಆಯನೂರುಮಂಜುನಾಥ್ ಅವರನ್ನು ಪಕ್ಷಕ್ಕ ಬರಮಾಡಿಕೊಂಡಿದ್ದಾರೆ. ಆದರೆ ಆಯನೂರು ಅವರ ಸೇರ್ಪಡೆಯನ್ನು ವಿರೋಧಿಸುವ ಹೇಳಿಕೆಗಳನ್ನು ನೀಡಿರುವ ಯೋಗೀಶ್ ಪಕ್ಷದ ಕಚೇರಿಗೆ ಬಂದಾಗ ಆಯನೂರುಮಂಜುನಾಥ್ ಅವರನ್ನು ಅವಮಾನಿಸಿದ್ದಾರೆ. ಇದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ನ ಪ್ರಮುಖಪದಾಧಿಕಾರಿಗಳೆ ಕೆಪಿಸಿಸಿ ಮತ್ತು ಜಿಲ್ಲಾ ಕಾಂಗ್ರೆಸ್ ಗೆ ನೀಡಿರುವ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದು ಪಕ್ಷದ ಶಿಸ್ತು ಉಲ್ಲಂಘಿಸಿರುವ ಯೋಗೀಶ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ಯೋಗೀಶ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್. ಎಸ್ ಸುಂದರೇಶ್ ಅವರು ಪಕ್ಷದ ಶಿಸ್ತು ಉಲ್ಲಂಘನೆ ಆರೋಪದ ಮೇಲೆ ಯಾಕೆ ಪಕ್ಷದಿಂದ ಉಚ್ಚಾಟಿಸಬಾರದು ಎಂದು ಶೋಕಾಸ್ ನೋಟೀಸ್ ಜಾರಿಗೊಳಿಸಿದ್ದು ಸೂಕ್ತ ವಿವರಣೆ ನೀಡುವಂತೆ ಮೂರು ದಿನಗಳ ಗಡುವು ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ʻನಾನು ಯಾರಿಗೂ ಅವಮಾನ ಮಾಡಿಲ್ಲ.ಆದರೆ ನನ್ನ ವಿರುದ್ದ ಮಾಜಿ ಎಂಎಲ್‌ಸಿ ಆರ್.ಪ್ರಸನ್ನ ಕುಮಾರ್ ಹಾಗೂ ಮಾಜಿ ಮೇಯರ್ ಎಸ್.ಕೆ ಮರಿಯಪ್ಪ ಸುಳ್ಳು ದೂರು ನೀಡಿದ್ದಾರೆ. ನನಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸೋಕಾಸ್ ನೋಟೀಸ್ ಕೊಟ್ಟಿದ್ದಾರೆ. ಈ ದೂರಿನ ಹಿಂದೆ ಕಾಣದ ಕೈಗಳ ಕೈವಾಡವಿದೆ.ಇವರುಗಳು ವಿಧಾನ ಸಭಾ ಚುನಾವಣೆಯಲ್ಲಿ ನನ್ನ ವಿರುದ್ದ ಕೆಲಸ ಮಾಡಿದ್ದಾರೆ ಎಂಬುದನ್ನು ಕೆಪಿಸಿಸಿಗೆ ನಾನು ದೂರು ನೀಡುತ್ತೇನೆʻ
-ಹೆಚ್. ಸಿ ಯೋಗೀಶ್,ಮಹಾನಗರ ಪಾಲಿಕೆ ಸದಸ್ಯ
----------------------------------------------------------------------
ʻಎಚ್.ಸಿ ಯೋಗೇಶ್ ವರ್ತನೆ ಹಾಗೂ ಪಕ್ಷದಲ್ಲಿ ಶಿಸ್ತು ಉಲ್ಲಂಘಿಸಿರುವ ಕುರಿತು ದೂರು ಬಂದಿದೆ.ಪಕ್ಷದ ಶಿಸ್ತು ಉಲ್ಲಂಘನೆ ಆರೋಪದ ಮೇಲೆ ಯಾಕೆ ಪಕ್ಷದಿಂದ ಉಚ್ಚಾಟಿಸಬಾರದು ಎಂದು ಸೋಕಾಸ್ ನೋಟೀಸ್ ಜಾರಿಗೊಳಿಸಿದ್ದು ಸೂಕ್ತ ವಿವರಣೆ ನೀಡುವಂತೆ ಗಡುವು ನೀಡಿದ್ದೇವೆ.ಇದು ಪಕ್ಷದ ಆಂತರಿಕ ವಿಚಾರ.ಮಾಧ್ಯಮಗಳಿಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲʻ
- ಎಚ್.ಎಸ್ ಸುಂದರೇಶ್ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು. ಶಿವಮೊಗ್ಗ