ವಕ್ಫ್ ಆಸ್ತಿ ವಿಚಾರ | ನ.21, 22ರಂದು ಬಿಜೆಪಿ ಪ್ರತಿಭಟನೆ : ಡಾ.ಅಶ್ವತ್ಥನಾರಾಯಣ್

Update: 2024-11-19 13:04 GMT

ಬೆಂಗಳೂರು : ‘ವಕ್ಫ್ ಆಸ್ತಿ ಒತ್ತುವರಿ ಸಮಸ್ಯೆ ವಿರುದ್ಧ ‘ನಮ್ಮ ಭೂಮಿ ನಮ್ಮ ಹಕ್ಕು’ ಶೀರ್ಷಿಕೆ ಅಡಿಯಲ್ಲಿ ನ.21 ಮತ್ತು 22ರಂದು ಎಲ್ಲ ಜಿಲ್ಲಾಧಿಕಾರಿ ಕಚೇರಿ ಮತ್ತು ತಾಲೂಕು ಕಚೇರಿಗಳ ಮುಂದೆ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಿದ್ದೇವೆ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.

ಮಂಗಳವಾರ ನಗರದ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯ ಜೊತೆಗೆ ಎಲ್ಲ ಸಂತ್ರಸ್ತರಿಂದ ಅರ್ಜಿಗಳ ಸ್ವೀಕಾರ, ವಕ್ಫ್ ಅಧಿಕಾರ ದುರ್ಬಳಕೆಯಿಂದ ಶೋಷಣೆಗೆ ಒಳಗಾದವರ ಮಾಹಿತಿ ಸಂಗ್ರಹಿಸಲಾಗುತ್ತದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

‘ಕೇಂದ್ರದ ಸಚಿವರು, ಮಾಜಿ ಸಿಎಂಗಳು, ಹಿರಿಯರು, ವರಿಷ್ಠರು ಸೇರಿ 3 ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ್, ಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಈ 3 ತಂಡಗಳ ನೇತೃತ್ವ ವಹಿಸುತ್ತಿದ್ದಾರೆ ಎಂದು ವಿವರಿಸಿದರು.

ಅಧಿವೇಶನಕ್ಕೂ ಮೊದಲು ಬೆಳಗಾವಿಯಲ್ಲಿ ವಕ್ಫ್ ವಿಚಾರವಾಗಿ ಸಮಾವೇಶ ಏರ್ಪಡಿಸಲಾಗುವುದು. ಅಧಿಕಾರ ದುರ್ಬಳಕೆ ಕೈಬಿಡುವಂತೆ ಕಾಂಗ್ರೆಸ್ ಸರಕಾರ ಮತ್ತು ವಕ್ಫ್ ಮಂಡಳಿಗೆ ಸ್ಪಷ್ಟ ಸಂದೇಶ ನೀಡಲಿದ್ದೇವೆ. ಅಹವಾಲು, ಮಾಹಿತಿ ಸಂಗ್ರಹಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ರೈತರು, ವಕೀಲರು ಸೇರಿ ಪ್ರಮುಖರುಳ್ಳ 5 ಜನರ ತಂಡ ರಚಿಸಿದ್ದೇವೆ ಎಂದರು.

ಸರಕಾರ ದಿವಾಳಿಯಾಗಿದೆ. ವೇತನ ನೀಡಲು ಹಣವಿಲ್ಲ. ಶಾಸಕ ರಾಜು ಕಾಗೆಯವರು ಅನುದಾನ ಸಿಗದ ಬಗ್ಗೆ ತಿಳಿಸಿ ಆತ್ಮಹತ್ಯೆಯ ಮಾತನಾಡಿದ್ದಾರೆ. ಗವಿಯಪ್ಪ, ರಾಯರೆಡ್ಡಿ, ಬಿ.ಆರ್.ಪಾಟೀಲ್ ಮತ್ತಿತರರು ಮಾತನಾಡಿದ್ದಾರೆ ಎಂದ ಅವರು, ಅರ್ಹ ಬಿಪಿಎಲ್ ಕಾರ್ಡ್‍ದಾರರಿಗೆ ಸರಕಾರ ಅನ್ಯಾಯ ಮಾಡಲು ಮುಂದಾಗಿದೆ ಎಂದು ಟೀಕಿಸಿದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News