ʼಜಾತಿ ಗಣತಿʼ ವರದಿ ಸ್ವೀಕಾರ ಮಾಡುತ್ತೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2024-01-28 10:50 GMT

Photo: X/@CMofKarnataka

ಚಿತ್ರದುರ್ಗ : ನ್ಯಾಯಮೂರ್ತಿ ಕಾಂತರಾಜು ಆಯೋಗ ನೀಡಿರುವ ಜಾತಿ ಗಣತಿ ವರದಿಯನ್ನು ನಮ್ಮ ಸರಕಾರ ಸ್ವೀಕಾರ ಮಾಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ರವಿವಾರ ನಡೆದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಜಾತಿ ಗಣತಿ ವರದಿ ಮಾಡಿಸಿದ್ದೆ. ನನ್ನ ಬಳಿಕ ಮುಖ್ಯಮಂತ್ರಿಗಳಾದ ಎಚ್.ಡಿ ಕುಮಾರಸ್ವಾಮಿ, ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಯಾರೂ ಕೂಡ ಜಾತಿ ಗಣತಿ ವರದಿಯನ್ನು ಸ್ವೀಕರಿಸಲಿಲ್ಲ ಎಂದರು.

ಕಾಂತರಾಜ್ ಅವರ ವರದಿಯನ್ನು ಕೆಲವರು ಓದದೆ, ತಿಳಿಯದೆ ವಿರೋಧಿಸುತ್ತಿದ್ದಾರೆ. ಜಾತಿ ಗಣತಿಯ ವರದಿ ಬಗ್ಗೆ ಅವೈಜ್ಞಾನಿಕ ಎಂದು ಹೇಳಿಕೆ ನೀಡುತ್ತಿದ್ದಾರೆ. ವೈಜ್ಞಾನಿಕವಾಗಿಯೇ ಜಾತಿ ಗಣತಿಯನ್ನು ಮಾಡಲಾಗಿದೆ. ಜಾತಿ ಗಣತಿಯನ್ನು ನಾವು ಸ್ವೀಕರಿಸುತ್ತೇವೆ. ಏನಾದರೂ ಭಿನ್ನಾಭಿಪ್ರಾಯಗಳಿದ್ದರೆ ತಜ್ಞರ ಸಲಹೆ ಪಡೆದು ಅದನ್ನು ಸರಿಪಡಿಸಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

 ಸಾಮಾಜಿಕ ನ್ಯಾಯದ ವಿರೋಧಿಗಳ ಕೈಗೆ ಅಧಿಕಾರ ಹೋಗಬಾರದು

ಹಿಂದುಳಿದ, ದಲಿತ ಮತ್ತು ಶೋಷಿತ ಜಾತಿ ಸಮುದಾಯಗಳ ಜನ ತಮ್ಮ ಶತ್ರು ಯಾರು ಎನ್ನುವುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಶತ್ರುಗಳನ್ನು ಸ್ಪಷ್ಟವಾಗಿ ಗುರುತಿಸಬೇಕು. ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿ ನಿಮ್ಮ ಸ್ವಾಭಿಮಾನ ಬೆಳೆಸಿಕೊಳ್ಳಿ ಎಂದು ಸೂಚಿಸಿದರು.

ಮಂಡಲ್ ವರದಿಯನ್ನು ಬಿಜೆಪಿ ಮತ್ತು ಆರೆಸ್ಸೆಸ್ ವಿರೋಧಿಸುತ್ತಲೇ ಬಂದಿದೆ. ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಬಿಜೆಪಿ, ಆರೆಸ್ಸೆಸ್ ನಿರಂತರವಾಗಿ ವಿರೋಧಿಸುತ್ತಲೇ ಇದೆ. ಆದ್ದರಿಂದ ಸಂವಿಧಾನ ಮತ್ತು ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯದ ವಿರೋಧಿಗಳ ಕೈಗೆ ಅಧಿಕಾರ ಹೋಗಬಾರದು ಎಂದು ಅಂಬೇಡ್ಕರ್ ಎಚ್ಚರಿಸಿದ್ದರು. ಈ ಎಚ್ಚರಿಕೆಯನ್ನು ನಾವು ಮರೆಯಬಾರದು ಎಂದರು.

ಕುರಿ ಕಾಯುವವನ ಮಗ ಸಿಎಂ ಆಗಿಬಿಟ್ಟೆ ಎನ್ನುವ ಕಾರಣಕ್ಕೆ ಪಟ್ಟ ಭದ್ರರು ನನ್ನನ್ನು ವಿರೋಧಿಸುತ್ತಾರೆ

ಬಾಬಾ ಸಾಹೇಬ್ ಅವರ ಸಂವಿಧಾನ ಇಲ್ಲದೇ ಹೋಗಿದ್ದರೆ ಕೆ.ಎಸ್.ಈಶ್ವರಪ್ಪ ಸಿ.ಟಿ.ರವಿ ಮತ್ತು ಆರ್.ಅಶೋಕ್ ಶಾಸಕರಾಗಿ ವಿಧಾನಸಭೆ ಪ್ರವೇಶಿಸಲು ಸಾಧ್ಯವೇ ಇರಲಿಲ್ಲ. ಯಾರದ್ದೋ ಹೊಲ ಗದ್ದೆಗಳಲ್ಲಿ ಕೂಲಿ ಮಾಡುತ್ತಾ ಕೂರಬೇಕಾಗಿತ್ತು ಎಂದು ಮುಖ್ಯಮಂತ್ರಿಗಳು ಟೀಕಿಸಿದರು.

ಕುರಿ ಕಾಯುವವನ ಮಗ ಮುಖ್ಯಮಂತ್ರಿ ಆಗಿಬಿಟ್ಟೆ ಎನ್ನುವ ಕಾರಣಕ್ಕೆ ಪಟ್ಟ ಭದ್ರರು ನನ್ನನ್ನು ವಿರೋಧಿಸುತ್ತಾರೆ. ಎಲ್ಲಾ ಜಾತಿ, ಎಲ್ಲಾ ಧರ್ಮದ ಮಧ್ಯಮ ವರ್ಗ ಮತ್ತು ಬಡವರಿಗೆ ಅನುಕೂಲ ಆಗುವ ಯೋಜನೆಗಳನ್ನು ಜಾರಿಗೆ ತಂದಿದ್ದಕ್ಕೆ ನನ್ನನ್ನು ವಿರೋಧಿಸುತ್ತಿದ್ದಾರೆ.

ಅನ್ನ ಭಾಗ್ಯ, ಶೂ ಭಾಗ್ಯ, ಸಮವಸ್ತ್ರ ಭಾಗ್ಯ ಸೇರಿ ಸಾಲು ಸಾಲು ಅನುಕೂಲಗಳನ್ನು ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರಿಗೆ ಕಲ್ಪಿಸಿದೆ. ಇದಕ್ಕೇ ನನ್ನನ್ನು ವಿರೋಧಿಸುತ್ತಾರೆ. ಆದರೆ ನಾನು ಎದೆ ಗುಂದದೆ ನಿಮ್ಮ ಪರವಾಗಿ ಇರುತ್ತೇನೆ ಎಂದರು.

ಜಾತಿ ತಾರತಮ್ಯ, ಜಾತಿ ಶೋಷಣೆ, ಜಾತಿ ಆಧಾರಿತ ಅಸಮಾನತೆ ಜಾರಿಯಲ್ಲಿ ಇರುವವರೆಗೆ ಇಂಥಾ ಸಮಾವೇಶಗಳು ಅಗತ್ಯ ಮತ್ತು ಅನಿವಾರ್ಯ ಎಂದು ವಿವರಿಸಿದರು.

ಸಂಘಟನೆಗಳ ಮೂಲಕ ಜಗೃತಿ ಪಡೆದುಕೊಂಡರೆ ಮಾತ್ರ ಜಾತಿ ವ್ಯವಸ್ಥೆ ನಾಶವಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಅಂಬೇಡ್ಕರ್ ಮುಂತಾದ ಮಹನೀಯರು ನೀಡಿದ್ದಾರೆ. ಕುಲ ಕುಲ ಎಂದು ಬಡಿದಾಡದಿರಿ ಎಂದು ಕರೆ ನೀಡಿದ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸಿ ಅವಮಾನಿಸಬೇಡಿ ಎಂದರು.

ಈ ಜಾತಿ ಶೋಷಣೆಗೆ ಕೊನೆ ಹಾಡುವ ಉದ್ದೇಶದಿಂದಲೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ನೀಡಿದರು. ಸಾಹಿ ಮಹಾರಾಜ್, ಜ್ಯೋತಿಬಾ ಫುಲೆ, ಬುದ್ದ, ಬಸವಣ್ಣ, ನಾರಾಯಣಗುರು, ನಾಲ್ವಡಿ ಅರಸರು, ವಿವೇಕಾನಂದ, ಕನಕದಾಸರೆಲ್ಲರೂ ಈ ಜಾತಿ ವ್ಯವಸ್ಥೆ ತೊಡೆದು ಹಾಕಲು ಶ್ರಮಿಸಿದರು. ನಮ್ಮ ಸಂವಿಧಾನ ಕೂಡ ಈ ಎಲ್ಲಾ ಮಹನೀಯರ ಆಶಯಗಳನ್ನು ಒಳಗೊಂಡಿದೆ ಎಂದರು.

.‌

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News