ರಾಹುಲ್ ಗಾಂಧಿ ಕುರಿತ ಸಿ.ಟಿ. ರವಿ ಹೇಳಿಕೆಯೂ ಪರಿಶೀಲನೆ ಮಾಡಲಾಗುವುದು: ಡಾ. ಪರಮೇಶ್ವರ್
ಬೆಂಗಳೂರು: ಮೇಲ್ಮನೆ ಸದನದೊಳಗೆ ಬಿಜೆಪಿ ಸದಸ್ಯ ಸಿ.ಟಿ.ರವಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಕುರಿತು ಟೀಕಿಸಿರುವ ಹೇಳಿಕೆಯನ್ನೂ ಪರಿಶೀಲನೆ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರನ್ನು ಮಾದಕ ವಸ್ತು ವ್ಯಸನಿ ಎಂದಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು. ಅಲ್ಲದೆ, ಸಚಿವೆ ಕುರಿತು ಹಿರಿಯ ಜನಪ್ರತಿನಿಧಿ ಆಗಿ ಅವರು ಬೈದಿದ್ದು ಸರಿಯಲ್ಲ, ಅವರು ಏಕೆ ಬೈಯಬೇಕಿತ್ತು? ಎಂದು ಪ್ರಶ್ನಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಮಾನಹಾನಿ ಹೇಳಿಕೆ ಆರೋಪ ಪ್ರಕರಣ ಸಂಬಂಧ ಶನಿವಾರ ದಿನವಿಡೀ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರಿಗೆ ತಕ್ಷಣ ಬಿಡುಗಡೆಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತು. ಇನ್ನೊಂದೆಡೆ, ಇದೇ ವಿಚಾರವಾಗಿ ರಾಜ್ಯದ ವಿವಿಧೆಡೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟಿಸಿದರು.