ಸರಕಾರದ ತಪ್ಪುಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಆರ್.ಅಶೋಕ್

Update: 2023-12-02 13:06 GMT

ಬೆಂಗಳೂರು: ‘ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿ.4ರಿಂದ ಆರಂಭವಾಗಲಿರುವ ವಿಧಾನ ಮಂಡಲ ಕಲಾಪವು ಬಿಜೆಪಿ ಪಾಲಿಗೆ ಪ್ರಮುಖ ಅಧಿವೇಶನ. ಬರ ಪರಿಸ್ಥಿತಿ ಸೇರಿದಂತೆ ಸರಕಾರ ಅಧಿಕಾರಕ್ಕೆ ಬಂದ ಕೇವಲ ಆರು ತಿಂಗಳಲ್ಲಿ ಅರವತ್ತು ತಪ್ಪುಗಳಾಗಿದ್ದು, ಅವುಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸರಕಾರ ಪ್ರಾರಂಭದಲ್ಲಿ ವರ್ಗಾವಣೆ ಅಂಗಡಿ ತೆರೆದರು. ಐಟಿ ದಾಳಿಯಾಗಿ ಇವರ ಲೂಟಿ ಹಣ ಸಿಕ್ಕಿದೆ. ಅಧಿವೇಶನದಲ್ಲಿ ಬಿಜೆಪಿ-ಜೆಡಿಎಸ್ ಒಂದಾಗಿ, ಒಟ್ಟಾಗಿ ಹೋರಾಟ ಮಾಡುತ್ತೇವೆ. ನಿಲುವಳಿಗಳನ್ನೂ ಒಟ್ಟಾಗಿ ಮಂಡಿಸಿ ಚರ್ಚೆ ನಡೆಸುತ್ತೇವೆ’ ಎಂದು ಹೇಳಿದರು.

‘ಈ ಸರಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಸರಕಾರಕ್ಕೆ ಚಾಟಿ ಬೀಸುವ ಕೆಲಸವನ್ನು ಜೆಡಿಎಸ್-ಬಿಜೆಪಿ ಒಟ್ಟಾಗಿ ಮಾಡಲಿದೆ. ಸರಕಾರ, ಮಂತ್ರಿಗಳು ಬರ ನಿರ್ವಹಣೆಗೆ ಯಾವ ಕೆಲಸವನ್ನೂ ಮಾಡಿಲ್ಲ, ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಬರ, ಕಾನೂನು ಸುವ್ಯವಸ್ಥೆ ವೈಫಲ್ಯ, ಶಾಲೆಗಳಿಗೆ ಹುಸಿ ಬಾಂಬ್ ಮೇಲ್, ಝಮೀರ್ ಅಹಮದ್ ಖಾನ್ ಅಸಂಬದ್ಧ ಹೇಳಿಕೆ, ಎನ್‍ಇಪಿ ರದ್ದು, ಸಾಮಾಜಿಕ ಸಮೀಕ್ಷಾ ವರದಿ, ನೀರಾವರಿ ಯೋಜನೆಗಳು ವಿಚಾರಗಳಲ್ಲಿ ನಿಲುವಳಿ ಸೂಚನೆ ಮಂಡಿಸಿ ಚರ್ಚೆ ಮಾಡುತ್ತೇವೆ ಎಂದು ಅವರು ಮಾಹಿತಿ ನೀಡಿದರು.

‘ಕಾಂಗ್ರೆಸ್ ಪಕ್ಷದ ಐದೂ ಗ್ಯಾರಂಟಿಗಳು ವಿಫಲವಾಗಿವೆ, ಇದರ ಬಗ್ಗೆಯೂ ಚರ್ಚೆ ಮಾಡುತ್ತೇವೆ. ನಿರುದ್ಯೋಗಿಗಳಿಗೆ ಆರು ತಿಂಗಳಿಂದ ಸರಕಾರ ನಾಮ ಹಾಕಿದೆ. ಡಿಕೆಶಿ ಪ್ರಕರಣ ಸಿಬಿಐ ತನಿಖೆಯ ಅನುಮತಿ ವಾಪಸ್ ಬಗ್ಗೆಯೂ ಸದನದಲ್ಲಿ ಚರ್ಚೆ ಮಾಡುತ್ತೇವೆ. ರಾಜ್ಯದಲ್ಲಿ ಅಭಿವೃದ್ಧಿ ವಿಚಾರದಲ್ಲಿ ಸರಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಅವರು ಆರೋಪಿಸಿದರು.

ಜನ ಪಾಠ ಕಲಿಸುತ್ತಾರೆ: ‘ನಾವು ರಾಜ್ಯದ ಜನರ ಕಷ್ಟಗಳ ಬಗ್ಗೆ ಚರ್ಚೆ ಮಾಡುತ್ತಿದ್ದರೆ, ಡಿಕೆಶಿ ಜನರ ಹಿತ, ಕಷ್ಟ ಕಡೆಗಣಿಸಿ ತೆಲಂಗಾಣಕ್ಕೆ ಹೋಗಿದ್ದಾರೆ. ತೆಲಂಗಾಣ ಶಾಸಕರ ಹಿತವೇ ಡಿಕೆಶಿಗೆ ಹೆಚ್ಚಾಗಿದೆ. ಜನರ ಕಷ್ಟಕ್ಕಿಂತಲೂ ತೆಲಂಗಾಣ ಶಾಸಕರ ಯೋಗಕ್ಷೇಮವೇ ಡಿಕೆಶಿಗೆ ಮುಖ್ಯ.ಇವರಿಗೆ ಜನ ತಕ್ಕ ಪಾಠವನ್ನು ಸದ್ಯದಲ್ಲೇ ಕಲಿಸಲಿದ್ದಾರೆ ಎಂದು ಅಶೋಕ್ ಎಚ್ಚರಿಕೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News