ಕಾಂಗ್ರೆಸ್ ನಿಂದ ನನಗೆ ಆಹ್ವಾನ ಇದೆ: ಡಿ.ಕೆ.ಶಿವಕುಮಾರ್ ಭೇಟಿ ಬಗ್ಗೆ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದೇನು?

Update: 2023-09-06 14:37 GMT

ಪೂರ್ಣಿಮಾ ಶ್ರೀನಿವಾಸ್ ಅವರ ಕುಟುಂಬದ ಸದಸ್ಯರ ಜೊತೆ ಡಿ.ಕೆ ಶಿವಕುಮಾರ್‌ 

ಬೆಂಗಳೂರು, ಸೆ.6: ಲೋಕಸಭಾ ಚುನಾವಣೆಯಲ್ಲಿ ಶತಾಯ-ಗತಾಯ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂದು ಕಾರ್ಯಚರಣೆ ನಡೆಸುತ್ತಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು ಕುತೂಹಲ ಕೆರಳಿಸಿದೆ.

ಬುಧವಾರ ಕೆ.ಆರ್.ಪುರದ ದೇವಸಂದ್ರದಲ್ಲಿರುವ ಪೂರ್ಣಿಮಾ ಶ್ರೀನಿವಾಸ್ ನಿವಾಸಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರ ಕುಟುಂಬ ವರ್ಗದವರೊಂದಿಗೆ ಉಭಯ ಕುಶಲೋಪರಿ ವಿಚಾರಿಸಿದಲ್ಲದೆ, ಮಧ್ಯಾಹ್ನದ ಭೋಜನ ಸವಿದರು. ಈ ಸಂದರ್ಭದಲ್ಲಿ ಪೂರ್ಣಿಮಾ ಅವರ ಪತಿ ಶ್ರೀನಿವಾಸ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ‘ಇವತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ. ಮಾಜಿ ಸಚಿವ ಎ.ಕೃಷ್ಣಪ್ಪ ನನ್ನ ಆತ್ಮೀಯ ಸ್ನೇಹಿತರು. ಅವರ ಮಗಳು ಪೂರ್ಣಿಮಾ ನನ್ನ ಸಹೋದರಿ. ಅವರ ಅಳಿಯ ನನ್ನ ಸ್ನೇಹಿತರು. ಹಬ್ಬ ಆಚರಣೆ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸಲು ಬಂದಿದ್ದೇನೆ’ ಎಂದರು.

ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದೇನು?

‘ಕಾಂಗ್ರೆಸ್ ಪಕ್ಷದಿಂದ ನನಗೆ ಆಹ್ವಾನ ಇದೆ. ನಾನು ಬಿಜೆಪಿಯ ಸದಸ್ಯೆಯಾಗಿದ್ದೇನೆ. ಒಮ್ಮೆ ಬಿಬಿಎಂಪಿ ಸದಸ್ಯೆ ಹಾಗೂ ಒಮ್ಮೆ ಶಾಸಕಿಯಾಗಿ ಆಯ್ಕೆಯಾಗಿದ್ದೇನೆ. ನಾನು ಎಲ್ಲಿಯೂ ಪಕ್ಷ ಬಿಡುತ್ತಿರುವ ಕುರಿತು ಹೇಳಿಕೆ ನೀಡಿಲ್ಲ. ನಾನು ಪಕ್ಷ ಬಿಡುವುದಿದ್ದರೆ ಬೇರೆಯವರಂತೆ ಕದ್ದು ಮುಚ್ಚಿ ಹೋಗುವುದಿಲ್ಲ. ಧೈರ್ಯವಾಗಿಯೆ ಎಲ್ಲರಿಗೂ ಹೇಳಿ ಹೋಗುತ್ತೇನೆ’ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

‘ನನ್ನ ತಂದೆ ಮಾಜಿ ಎ.ಕೃಷ್ಣಪ್ಪ ಹಿಂದುಳಿದ ವರ್ಗಗಳ ನಾಯಕರಾಗಿ, ಶಾಸಕ, ಸಚಿವರಾಗಿ ವರ್ತೂರು ಕ್ಷೇತ್ರದಲ್ಲಿ ಎಲ್ಲ ಸಮಾಜವನ್ನು ಒಟ್ಟಿಗೆ ಕರೆದುಕೊಂಡು ಹೋದವರು. ಅಂತಹ ಕುಟುಂಬದ ಅವಶ್ಯಕತೆ ಎಲ್ಲ ಪಕ್ಷಗಳಿಗೆ ಇರುತ್ತದೆ. ಕಾಂಗ್ರೆಸ್ ಪಕ್ಷಕ್ಕೂ ನಮ್ಮ ಕುಟುಂಬದ ಅವಶ್ಯಕತೆ ಇರಬಹುದು. ಮುಂದೆ ಏನಾಗುತ್ತದೋ ನೋಡೋಣ’ ಎಂದು ಅವರು ತಿಳಿಸಿದರು.

‘ನನಗೆ ಬಿಜೆಪಿ ಮೇಲೆ ಯಾವುದೆ ಅಸಮಾಧಾನ ಇಲ್ಲ. ಹಿರಿಯೂರು ಕ್ಷೇತ್ರದಲ್ಲಿ ಶಾಸಕಿಯಾಗಿ ಉತ್ತಮ ಕೆಲಸ ಮಾಡಿದ್ದೇನೆ. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ನನಗೆ ಅನುದಾನ ನೀಡಿದ್ದಾರೆ. ಆದರೂ, ಜನ ಮತ ನೀಡಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳು ಇರಬಹುದು’ ಎಂದು ಪೂರ್ಣಿಮಾ ತಿಳಿಸಿದರು.

ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಒಕ್ಕಲಿಗ ಸಮುದಾಯದ ಮತಗಳು ಜೆಡಿಎಸ್ ಬದಲು ಕಾಂಗ್ರೆಸ್‍ಗೆ ಹೋಗಿದ್ದು, ಗ್ಯಾರಂಟಿ ಘೋಷಣೆಗಳಿಂದ ಮಹಿಳೆಯರು ಕಾಂಗ್ರೆಸ್ ಪರವಾಗಿ ಒಲವು ತೋರಿದ್ದು ನನ್ನ ಹಿನ್ನಡೆಗೆ ಕಾರಣ ಇರಬಹುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News