ಸಂಸತ್ ಭವನದ ಒಳಗೆ ನುಗ್ಗಿ ದಾಂಧಲೆ ನಡೆಸಿದ ಮನೋರಂಜನ್ ಯಾರು?
ಮೈಸೂರು: ದಿಲ್ಲಿಯ ಸಂಸತ್ ಭವನದ ಒಳಗೆ ನುಗ್ಗಿ ದಾಂಧಲೆ ನಡೆಸಿದ ಇಬ್ಬರು ಯುವಕರಲ್ಲಿ ಮನೋರಂಜನ್ ಎಂಬಾತ ಮೈಸೂರು ನಗರದ ನಿವಾಸಿಯಾಗಿದ್ದಾನೆ.
ಮೈಸೂರು ನಗರದ ವಿಜಯನಗರ ನಿವಾಸಿ ದೇವರಾಜೇಗೌಡ ಮತ್ತು ಶೈಲಜ ದಂಪತಿಗಳ ಪುತ್ರ ಮನೋರಂಜನ್ (34) ಎಂದು ತಿಳಿದು ಬಂದಿದೆ.
ಮೂಲತಃ ಹಾಸನಜಿಲ್ಲೆ ಅರಕಲಗೂಡು ತಾಲೂಕಿನ ಮಲ್ಲಾಪುರ ಗ್ರಾಮದವನಾಗಿದ್ದು, ಇವರ ತಂದೆ ದೇವರಾಜೇಗೌಡ ಮೈಸೂರಿನ ವಿಕ್ರಾಂತ್ ಟೈರ್ಸ್ ಕಂಪನಿಯಲ್ಲಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮನೋರಂಜನ್ ತಂದೆ ದೇವರಾಜೇಗೌಡ ತಮ್ಮ ನಿವಾಸದ ಬಳಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ʼಸಂಸತ್ ಭವನ ನಮ್ಮೆಲ್ಲರ ದೇಗುಲ, ಅಂತಹ ದೇಗುಲಕ್ಕೆ ನುಗ್ಗಿ ನನ್ನ ಮಗ ದೊಡ್ಡ ತಪ್ಪು ಮಾಡಿದ್ದಾನೆ. ಆತ ಮಾಡಿರುವ ತಪ್ಪಿಗೆ ಗಲ್ಲುಶಿಕ್ಷೆ ಬೇಕಾದರೂ ನೀಡಿʼ ಎಂದು ಬಾವುಕರಾದರು
"ಸಂಸದ ಪ್ರತಾಪ್ ಸಿಂಹ ಹಾಗು ನಮಗೂ ಒಡನಾಟವಿದೆ. ನಾವು ಮೂಲತಃ ಹಾಸನ ಜಿಲ್ಲೆಯವರು. ಪ್ರತಾಪ್ ಸಿಂಹ ಕೂಡ ಹಾಸನ ಜಿಲ್ಲೆಯವರು. ಕಳೆದ ಹದಿನೈದು ವರ್ಷಗಳಿಂದ ನಾವು ಮೈಸೂರಿನಲ್ಲಿ ನೆಲೆಸಿದ್ದೇವೆ. ನನ್ನ ಮಗ ಮನೋರಂಜನ್ ತುಂಬಾ ಒಳ್ಳೆಯವನು.ಯಾಕೆ ಈ ರೀತಿ ಮಾಡಿದ್ದಾನೋ ಗೊತ್ತಿಲ್ಲ" ಎಂದು ಹೇಳಿದರು
"ನನ್ನ ಮಗ ಪ್ರಧಾನಿ ಮೋದಿ ಆಭಿಮಾನಿಯಾಗಿದ್ದ ಪ್ರಧಾನಿಯನ್ನು ದೇವರೆಂದು ಪೂಜಿಸುತ್ತಿದ್ದ.ದೇಶದ ಬಗ್ಗೆ ಅಪಾರವಾಗಿ ಚಿಂತನೆ ಮಾಡುತ್ತಿದ್ದ. ನಮ್ಮ ಬಳಿ ಹೇಳಿಕೊಂಡಾಗ ನೀನೊಬ್ಬನೇ ಏನೂ ಮಾಡಲಾಗುವುದಿಲ್ಲ ಎಂದು ಬುದ್ದಿ ಹೇಳಿದ್ದೆ" ಎಂದರು.
ಸಂಸತ್ ಗೆ ಹೋಗಲು ಪಾಸ್ ಹೇಗೆ ಸಿಕ್ಕಿತೆಂದು ಗೊತ್ತಿಲ್ಲ. ಅವನು ಯಾವುದೇ ಕೆಟ್ಟ ಚಟುವಟಿಕೆಗಳಲ್ಲಿ ಭಾಗಿಯಾಗಿರಲಿಲ್ಲ. ಆತನನ್ನು ಬೆಂಗಳೂರಿನಲ್ಲಿ ಬಿಇ ಓದಿಸಿದ್ದೆ. ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದೆ ಎಂದು ಹೇಳಿದರು.
"ಎರಡು ದಿನಗಲ ಹಿಂದೆ ಬೆಂಗಳೂರಿಗೆ ಹೋಗುತ್ತೇನೆ ಎಂದಿದ್ದ: ತಾಯಿ ಶೈಲಜಾ"
ನನ್ನ ಮಗ ಮನೋರಂಜನ್ ತುಂಬಾ ಒಳ್ಳೆಯ ಹುಡುಗ. ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಎಂದು ಮನೋರಂಜನ್ ತಾಯಿ ಶೈಲಜಾ ಬಾವುಕರಾದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವನು ತುಂಬಾ ಒಳ್ಳೆಯವನು ಇಲ್ಲಿ ಯಾರನ್ನಾದರೂ ಕೇಳಿ. ಅವನು ಈ ರೀತಿ ಮಾಡಿದ್ದಾನೆ ಎಂದು ಟಿವಿ ನೋಡಿದಾಗಲೇ ನಮಗೆ ಗೊತ್ತಾಗಿದ್ದು ಎಂದು ಹೇಳಿದರು.
ಆತ ಇಂಜಿನಿಯರಿಂಗ್ ಮುಗಿಸಿ ಎಲ್ಲೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಆಗಾಗ ಬೆಂಗಳೂರು ಮತ್ತು ಬೇರೆ ಬೇರೆ ಕಡೆಗೆ ಹೋಗುತ್ತಿದ್ದ. ಅವನು ಏನು ಮಾಡುತ್ತಿದ್ದಾನೆ ಎಂಬುದನ್ನೇ ನಮಗೆ ಹೇಳುತ್ತಿರಲಿಲ್ಲ ಎಂದು ಹೇಳಿದರು.
ಮನೆಯಿಂದ ಹೋದ ದಿನ ಸಂಜೆ ದೂರವಾಣಿ ಕರೆ ಮಾಡಿ ಮಾತನಾಡಿದ್ದ, ತನ್ನ ತಂಗಿಯ ಮಗು ಬಗ್ಗೆ ವಿಚಾರಿಸಿದ್ದ ಅಷ್ಟು ಬಿಟ್ಟರೆ ಬೇರೇನೂ ಮಾತನಾಡಿರಲಿಲ್ಲ ಎಂದು ಮಗನ ಬಗ್ಗೆ ತಿಳಿಸಿದರು.