ಮೋದಿ ಸುನಾಮಿ ಇದ್ದಿದ್ರೆ ಬಿಜೆಪಿಗೆ ಮೈತ್ರಿ ಬೇಕಿತ್ತಾ?: ಪ್ರಿಯಾಂಕ್ ಖರ್ಗೆ
ಕಲಬುರಗಿ: ದೇಶದಲ್ಲಿ ನರೇಂದ್ರ ಮೋದಿ ಸುನಾಮಿ ಇದ್ದಿದ್ರೆ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿರಲಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸುನಾಮಿ ಇದ್ದಿದ್ರೆ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಸ್ವಪಕ್ಷದ ಕಾರ್ಯಕರ್ತರಿಂದ ಗೋ ಬ್ಯಾಕ್ ಅಭಿಯಾನ ಆರಂಭವಾಗುತ್ತಿರಲಿಲ್ಲ. ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮೈತ್ರಿ ಮಾಡಿಕೊಳ್ಳುತ್ತಿದೆ ಎಂದು ಅವರು ಟೀಕಿಸಿದರು.
ಮೋದಿ ಗ್ಯಾರಂಟಿಗಳು ಟಿವಿಯಲ್ಲಿ ಮಾತ್ರ ಕಾಣುತ್ತದೆ. ನಮ್ಮ ಗ್ಯಾರಂಟಿ ಜನರ ಕೈಯಲ್ಲಿ ಇದೆ. ಹತ್ತು ವರ್ಷ ಅಧಿಕಾರ ಪೂರೈಸಿದರೂ ಯಾವ ಸಾಧನೆಯೂ ಮಾಡಲು ಆಗಿಲ್ಲ. ಅದಕ್ಕಾಗಿ ದೇವರು, ಧರ್ಮದಲ್ಲಿ ಹೆಸರಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಕೇಂದ್ರ ಸರಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ರಾಜ್ಯದ ಬಿಜೆಪಿಯಲ್ಲಿ ಆರ್.ಅಶೋಕ್, ಬಿ.ವೈ.ವಿಜಯೇಂದ್ರ, ಅರವಿಂದ ಬೆಲ್ಲದ್ ನಾಯಕತ್ವವನ್ನು ರಾಜ್ಯದ ಬಿಜೆಪಿಯವರೆ ಒಪ್ಪುತ್ತಿಲ್ಲ. ಬಿ.ಎಲ್. ಸಂತೋಷ್ ಹಾಗೂ ಯಡಿಯೂರಪ್ಪ ನಡುವೆ ಇನ್ನೂ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.