ತೇಜಸ್ವಿ ಸೂರ್ಯ ಮೇಲೆ ಕೇಳಿ ಬಂದಿದ್ದ ‘ಮೀಟೂʼ ಆರೋಪದ ಬಗ್ಗೆ ಬಿಜೆಪಿ ಮಾತಾಡಿಲ್ಲ ಏಕೆ?: ಕಾಂಗ್ರೆಸ್
ಬೆಂಗಳೂರು: ‘ಬಿಜೆಪಿ ಪಕ್ಷದ ನಾಯಕರ ಮಹಿಳಾ ಪೀಡನೆಯ ಪ್ರಕರಣಗಳು ಒಂದೆರಡಲ್ಲ. ಬಿಜೆಪಿಗೆ ನಿಜಕ್ಕೂ ಮಹಿಳೆಯರ ಘನತೆಯ ಬಗ್ಗೆ ಕಾಳಜಿ ಇದ್ದಿದ್ದೇ ಆದರೆ, ಸಂಸದ ತೇಜಸ್ವಿ ಸೂರ್ಯ ಮೇಲೆ ಕೇಳಿಬಂದಿದ್ದ ಮೀಟೂ ಆರೋಪದ ಬಗ್ಗೆ ಬಿಜೆಪಿ ಮಾತಾಡಲಿಲ್ಲ ಏಕೆ?’ ಎಂದು ಕಾಂಗ್ರೆಸ್ ಖಾರವಾಗಿ ಪ್ರಶ್ನಿಸಿದೆ.
ಸೋಮವಾರ ಸಾಮಾಜಿಕ ಜಾಲತಾಣ ʼಎಕ್ಸ್ʼ ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಸಂಸದ ಪ್ರತಾಪ್ ಸಿಂಹ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದು ಜಾಲತಾಣಗಳಲ್ಲಿ ಹರಿದಾಡಿದಾಗ ಸಂಸದನ ಹೀನ ವರ್ತನೆಯನ್ನು ಖಂಡಿಸಲಿಲ್ಲವೇಕೆ?, ರಾಮ್‍ದಾಸ್ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಆರೋಪ ಕೇಳಿಬಂದಾಗ ಬಿಜೆಪಿ ಮೌನವಹಿಸಿದ್ದೇಕೆ?. ಆರಗ ಜ್ಞಾನೇಂದ್ರ ಅತ್ಯಾಚಾರ ಸಂತ್ರಸ್ತೆಯ ಬಗ್ಗೆ ಕ್ಷುಲ್ಲಕವಾಗಿ ಮಾತಾಡಿದಾಗ ಬಿಜೆಪಿ ಬಾಯಿ ಮುಚ್ಚಿಕೊಂಡಿದ್ದೀಕೆ?, ಉತ್ತರಿಸುವಿರಾ?’ ಎಂದು ಕೇಳಿದೆ.
‘ಯೋಧರ ಹತ್ಯೆ ತನಿಖೆ ಮಾಡುವುದಕ್ಕಿಂತ ಸಾರ್ವಜನಿಕ ಚರ್ಚೆಯ ಮೂಲಕ ಚುನಾವಣೆಗೆ ಬಳಸಿಕೊಂಡಿದ್ದೀರಿ ಅಲ್ಲವೇ?. ಸಂಸತ್ ದಾಳಿ ಪ್ರಕರಣದಲ್ಲಿ ನಿಮ್ಮ ಪಕ್ಷದ ಸಂಸದ ಪ್ರತಾಪ್ ಸಿಂಹರನ್ನು ತನಿಖೆಗೆ ಒಳಪಡಿಸದಿರುವಾಗ ನಿಮ್ಮ ತನಿಖೆಗೆ ವಿಶ್ವಾಸಾರ್ಹ ಎಂದು ನಂಬಲು ಸಾಧ್ಯವೇ?’ ಎಂದು ಕಾಂಗ್ರೆಸ್ ಟೀಕಿಸಿದೆ.