ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಬಳಿಕ ಜೆಡಿಎಸ್ ಪಕ್ಷದ ಚಿಹ್ನೆ ಉಳಿಯುತ್ತಾ?: ಸಿ.ಎಂ. ಇಬ್ರಾಹಿಂ
ಬೆಂಗಳೂರು: ‘ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ನಂತರ ನಮ್ಮ ಪಕ್ಷದ ಚಿಹ್ನೆ ಉಳಿಯುತ್ತದೆಯೇ?’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರಶ್ನಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದ ಜೆಡಿಎಸ್ ಘಟಕದವರು ಈ ಮೈತ್ರಿ ವಿರೋಧಿಸಿದ್ದಾರೆ. ಹಾಗೇ, ರಾಜಸ್ತಾನ, ಮಹಾರಾಷ್ಟ್ರ ಮತ್ತು ಗುಜರಾತಿನ ಘಟಕಗಳ ಜೊತೆಗೆ ಮಾತನಾಡಬೇಕು. ಅವರೆಲ್ಲ ಒಪ್ಪಲಿಲ್ಲ ಅಂದರೆ ಪಕ್ಷದ ಚಿಹ್ನೆ ಉಳಿಯುತ್ತಾ? ಎಂದರು.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೂ ನಾವು ಜಾತ್ಯತೀತ ಸಿದ್ಧಾಂತ ಬಿಟ್ಟುಕೊಡಲು ಆಗುವುದಿಲ್ಲ. ಜೆಡಿಎಸ್ ಸಿದ್ಧಾಂತವನ್ನು ಮೆಚ್ಚಿ ಬಿಜೆಪಿಯವರು ಬಂದಿದ್ದಾರೆಯೇ? ಅಥವಾ ಬಿಜೆಪಿ ಸಿದ್ಧಾಂತವನ್ನು ಮೆಚ್ಚಿ ಜೆಡಿಎಸ್‍ನವರು ಹೋಗಿದ್ದಾರಾ? ಎಂಬ ಪ್ರಶ್ನೆ ಎದುರಾಗಿದೆ ಎಂದ ಅವರು, ಈಗಾಗಲೇ ಬೇರೆ ರಾಜ್ಯಗಳಲ್ಲಿ ಜಾತಿಗಣತಿ ಬಿಡುಗಡೆಯಾಗಿದೆ. ಇಲ್ಲಿಯೂ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನ ಮನಸ್ಸಿನಲ್ಲಿ ಯಾವುದೇ ಯೋಚನೆ ಇಲ್ಲ. ಅಲ್ಲದೆ, ಈಗ ಮಹಾತ್ಮ ಗಾಂಧಿ ಸಹ ಚುನಾವಣೆಗೆ ನಿಂತರೂ 20 ಕೋಟಿ ಹಣ ಬೇಕಾಗುತ್ತೆ. ಇನ್ನೂ, ಲೋಕಸಭೆ ಚುನಾವಣೆಯಲ್ಲಿ ಜನರ ಒಲವು ಯಾವ ಕಡೆ ಇರುತ್ತದೆ ಎಂಬುದು ಬಹಳ ಮುಖ್ಯ. ಕೇಂದ್ರದ ಚುನಾವಣೆಯಲ್ಲಿ ಯಾರನ್ನು ಬಿಂಬಿಸುತ್ತೀರಿ?. ಇಂಡಿಯಾ ಮೈತ್ರಿ ಪ್ರಧಾನಿಗೆ ಯಾರನ್ನು ಬಿಂಬಿಸುತ್ತಾರೆ ಕಾದು ನೋಡಬೇಕು ಎಂದು ತಿಳಿಸಿದರು.