ನೋಟಿನ ಮೇಲೆ ಬರೆದಿರುವ ʼರಿಸರ್ವ್ ಬ್ಯಾಂಕ್ ಆಫ್ ಇಂಡಿಯಾʼ ಹೆಸರನ್ನೂ ಬದಲಾಯಿಸುತ್ತೀರಾ?: ಕೇಂದ್ರಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನೆ

Update: 2023-09-06 15:02 GMT

ಬೆಳಗಾವಿ, ಸೆ.6: ‘ಇಂಡಿಯಾ ಎಂದು ವಿರೋಧ ಪಕ್ಷಗಳ ಒಕ್ಕೂಟಕ್ಕೆ ಹೆಸರು ಇಟ್ಟುಕೊಂಡಿದ್ದಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಹೆದರಿಕೆ ಶುರುವಾಗಿದೆ. ಪ್ರಧಾನಿ ಮೋದಿ ಕೂಡ ಇಷ್ಟಕ್ಕೇ ಹೆದರಿ ಬಿಟ್ಟಂತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಬುಧವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತ ಎಂಬ ಹೆಸರಿಗೆ ನಾವು ಯಾರೂ ವಿರೋಧ ಮಾಡಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ನೋಟಿನ ಮೇಲೆ ಬರೆದಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎನ್ನುವ ಹೆಸರನ್ನು ಬದಲಾಯಿಸುತ್ತಾರಾ ? ಇವರು ಏನೇನು ಬದಲಾಯಿಸುತ್ತಾರೆ ಎಂದು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು.

ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಕಾಂಗ್ರೆಸ್ ಹೋರಾಟ ಮಾಡಿದೆ. ಭಾರತ ದೇಶ ಈ ಮಟ್ಟಕ್ಕೆ ಬೆಳೆಯಲು ಕಾಂಗ್ರೆಸ್ ಪಕ್ಷದ ತ್ಯಾಗ ಬಲಿದಾನವಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಶಾಂತಿ ನೆಲೆಸಬೇಕು ಎಂದು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದರು. ಭಾರತ್ ಜೋಡೋ ಯಾತ್ರೆಗೆ ಈಗ ಒಂದು ವರ್ಷವಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News