ಲೋಕಸಭಾ ಚುನಾವಣೆಗೆ ಗೆಲುವಿನ ಸಾಮರ್ಥ್ಯವೇ ಮಾನದಂಡ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Update: 2024-02-04 14:08 GMT

ಬೆಳಗಾವಿ: ತಮ್ಮ ಪುತ್ರ ಮೃಣಾಲ್ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ನಾನು ಕೇಳಿಲ್ಲ. ಆದರೆ, ಕ್ಷೇತ್ರದ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಗೆಲುವಿನ ಸಾಮರ್ಥ್ಯದ ಮಾನದಂಡದ ಮೇಲೆ ಅಭ್ಯರ್ಥಿ ಆಯ್ಕೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ತಮ್ಮ ಪುತ್ರ ಮೃಣಾಲ್‍ಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದು ಅಥವಾ ಬಿಡುವುದು ವರಿಷ್ಠರಿಗೆ ಬಿಟ್ಟ ವಿಚಾರ. ಈ ಹಿಂದೆ ನನ್ನ ಸಹೋದರ ಚನ್ನರಾಜ ಹಟ್ಟಿಹೊಳಿ ವಿಧಾನ ಪರಿಷತ್ ಸದಸ್ಯ ಆಗುವ ವೇಳೆಯಲ್ಲೂ ಜಿಲ್ಲೆಯ ಮುಖಂಡರು ಹಾಗೂ ಜನರ ಒತ್ತಾಸೆ ಇತ್ತು ಎಂದು ಸ್ಪಷ್ಟಪಡಿಸಿದರು.

ಈಗಲೂ ಜಿಲ್ಲೆಯ ಜನರ ಅಪೇಕ್ಷೆಯಂತೆ, ಎಲ್ಲ ಸಮುದಾಯಗಳ ಮುಖಂಡರು, ತಮ್ಮ ಪುತ್ರ ಸ್ಪರ್ಧಿಸಬೇಕೆಂದು ಅಪೇಕ್ಷೆ ಪಡುತ್ತಿದ್ದಾರೆ. ಆದರೆ, ಅಂತಿಮವಾಗಿ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಗೊತ್ತಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ತಲೆಬಾಗುತ್ತೇವೆ ಎಂದು ಅವರು ನುಡಿದರು.

ಚುನಾವಣೆಯಲ್ಲಿ ತಮ್ಮ ಪುತ್ರ ಮೃಣಾಲ್‍ಗೆ ಪಕ್ಷ ಟಿಕೆಟ್ ನೀಡಿದರೂ ಅಥವಾ ಬೇರೆ ಯಾರಿಗೆ ಟಿಕೆಟ್ ನೀಡಿದರೂ ಪ್ರಾಮಾಣಿಕವಾಗಿ ಚುನಾವಣೆ ಎದುರಿಸುತ್ತೇವೆ. ಈಗಾಗಲೇ ಯಾರಿಗೆ ಟಿಕೆಟ್ ನೀಡಿದರೆ ಗೆಲ್ಲಬಹುದು ಎನ್ನುವ ಸಮೀಕ್ಷೆ ಮಾಡಲಾಗುತ್ತಿದೆ. ಅಂತಿಮವಾಗಿ ಪಕ್ಷದ ಅಭ್ಯರ್ಥಿ ಗೆಲ್ಲಬೇಕು ಅಷ್ಟೇ. ಟಿಕೆಟ್ ಪಡೆಯುವುದಕ್ಕಾಗಿಯೇ ಪೈಪೋಟಿ ನಡೆಸುವುದಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಚುನಾವಣೆಗೆ ಕಾಂಗ್ರೆಸ್ ಪಕ್ಷ ಈಗಾಗಲೇ ಸಿದ್ದತೆ ಮಾಡಿಕೊಂಡಿದೆ. ಚುನಾವಣೆಯನ್ನು ನಾವು ಎಂದೂ ಹಗುರವಾಗಿ ತೆಗೆದುಕೊಂಡಿಲ್ಲ. ಪ್ರತಿಯೊಂದು ಹಂತದಲ್ಲೂ ನಮ್ಮ ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ. ವಿಧಾನಸಭೆ ಚುನಾವಣೆಗಿಂತ ಮುನ್ನ ಜನರಿಗೆ ಭರವಸೆ ಕೊಟ್ಟಂತಹ 5 ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ನುಡಿದಂತೆ ನಡೆದ ಆತ್ಮಸ್ಥೈರ್ಯದಿಂದ ಲೋಕಸಭಾ ಚುನಾವಣೆ ಮೂಲಕ ಜನರ ಬಳಿಗೆ ಹೋಗುತ್ತಿದ್ದೇವೆ ಎಂದು ಅವರು ಹೇಳಿದರು.

ಮೊದಲು ದೇಶದಲ್ಲಿ ಬರೀ 33 ಕೋಟಿ ಜನಸಂಖ್ಯೆ ಇತ್ತು. ಆದರೆ, ಈಗ 100 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಎಲ್ಲ ಸಮಾಜಗಳು ಬೆಳೆಯುತ್ತಿರುವ ಸಂದರ್ಭದಲ್ಲಿ ಜಾತಿವಾರು ಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ. ಪಂಚಮಸಾಲಿ ಸಮುದಾಯ 2 ‘ಎ’ಗೆ ಸೇರಿಸಬೇಕೆಂದು ಹೋರಾಟ ಮಾಡುತ್ತಿದೆ ಎಂದರು.

ಕುರುಬ ಸಮಾಜ ಎಸ್ಟಿಗೆ ಸೇರಿಸಬೇಕೆಂದು ಹೋರಾಟ ಮಾಡುತ್ತಿದೆ. ಮುಖ್ಯವಾಗಿ ಹಿಂದುಳಿದ ವರ್ಗಗಳನ್ನು ಮುನ್ನೆಲೆಗೆ ತರುವುದೇ ನಮ್ಮೆಲ್ಲರ ಆಶಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News