ಹೈಕೋರ್ಟ್‍ಗೆ ಡಿ.22 ರಿಂದ 30ರ ವರೆಗೆ ಚಳಿಗಾಲದ ರಜೆ

Update: 2023-12-22 17:14 GMT

ಬೆಂಗಳೂರು: ಹೈಕೋರ್ಟ್‍ಗೆ ಶುಕ್ರವಾರ(ಡಿ.22)ದಿಂದ ಡಿ.30ರ ವರೆಗೆ ಚಳಿಗಾಲದ ರಜೆ ಇರುತ್ತದೆ. ಡಿ.26 ಮತ್ತು 28ರಂದು ಹೈಕೋರ್ಟ್‍ನ ಮೂರೂ ಕೋರ್ಟ್‍ಗಳಲ್ಲಿ ರಜಾಕಾಲೀನ ಪೀಠಗಳು ತುರ್ತು ಅರ್ಜಿಗಳ ವಿಚಾರಣೆ ನಡೆಸಲಿವೆ.

ಡಿ.26ರಂದು ಬೆಂಗಳೂರು ಪೀಠದಲ್ಲಿ ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಝ್ ಮತ್ತು ಕೆ.ವಿ.ಅರವಿಂದ ಅವರು ವಿಭಾಗೀಯ ಪೀಠದ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ. ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಮತ್ತು ಟಿ.ವೆಂಕಟೇಶ್ ನಾಯ್ಕ್ ಪ್ರತ್ಯೇಕವಾಗಿ ಏಕಸದಸ್ಯ ಪೀಠದ ಅರ್ಜಿಗಳ ವಿಚಾರಣೆ ನಡೆಸುವರು.

ಡಿ.28ರಂದು ನ್ಯಾಯಮೂರ್ತಿಗಳಾದ ಆರ್.ನಟರಾಜ್ ಮತ್ತು ನ್ಯಾಯಮೂರ್ತಿ ಕೆ.ಅರವಿಂದ ವಿಭಾಗೀಯ ಪೀಠದ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ. ನ್ಯಾಯಮೂರ್ತಿಗಳಾದ ಎಂಜೆಎಸ್ ಕಮಲ್ ಮತ್ತು ಕೆ.ರಾಜೇಶ್ ರೈ ಪ್ರತ್ಯೇಕವಾಗಿ ಏಕಸದಸ್ಯ ಪೀಠದಲ್ಲಿ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ.

ಡಿ.26 ಮತ್ತು 28ರಂದು ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿಗಳಾದ ಹೇಮಂತ್ ಚಂದನಗೌಡರ್ ಮತ್ತು ವಿಜಯಕುಮಾರ್ ಎ.ಪಾಟೀಲ್ ಅವರು ವಿಭಾಗೀಯ ಪೀಠದ ಪ್ರಕರಣಗಳು ಮುಗಿದ ಬಳಿಕ ಏಕಸದಸ್ಯ ಪೀಠದ ಅರ್ಜಿಗಳನ್ನು ವಿಚಾರಣೆ ನಡೆಸಲಿದ್ದಾರೆ.

ಡಿ.26 ಮತ್ತು 28ರಂದು ಕಲಬುರಗಿ ಪೀಠದಲ್ಲಿ ನ್ಯಾಯಮೂರ್ತಿಗಳಾದ ಇ.ಎಸ್.ಇಂದಿರೇಶ್ ಮತ್ತು ಅನಿಲ್ ಬಿ.ಕಟ್ಟಿ ಅವರ ವಿಭಾಗೀಯ ಪೀಠದ ಅರ್ಜಿಗಳ ವಿಚಾರಣೆ ಮುಗಿದ ಬಳಿಕ ಪ್ರತ್ಯೇಕವಾಗಿ ಏಕಸದಸ್ಯ ಪೀಠದ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ.

ಈ ಸಂದರ್ಭದಲ್ಲಿ ತುರ್ತು ಮಧ್ಯಂತರ ಆದೇಶ ಅಗತ್ಯವಾಗಿರುವ ತಡೆಯಾಜ್ಞೆ, ಮಧ್ಯಂತರ ನಿರ್ದೇಶನ ಮತ್ತು ತಾತ್ಕಾಲಿಕ ಪ್ರತಿಬಂಧಕಾದೇಶ ಇತ್ಯಾದಿ ಅರ್ಜಿಗಳನ್ನು ಮಾತ್ರ ರಜಾಕಾಲೀನ ಪೀಠಗಳಲ್ಲಿ ವಿಚಾರಣೆಗೆ ಪರಿಗಣಿಸಲಾಗುತ್ತದೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಎಂ.ಚಂದ್ರಶೇಖರ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News