ಬಸ್‌ನಲ್ಲಿ ಕಂಡಕ್ಟರ್‌ ಧರಿಸಿದ್ದ ಟೋಪಿಯನ್ನು ಬಲವಂತವಾಗಿ ತೆಗೆಸಿದ ಮಹಿಳೆಯ ವೀಡಿಯೊ ವೈರಲ್; ಇದು ಅನೈತಿಕ ಪೊಲೀಸ್ ಗಿರಿ ಎಂದ ಜನ

Update: 2023-07-12 07:27 GMT

ಬೆಂಗಳೂರು, ಜು.12: ಬಸ್‌ನಲ್ಲಿ ನಿರ್ವಾಹಕರೊಬ್ಬರು ಕರ್ತವ್ಯದ ವೇಳೆ ಹಸಿರು ಬಣ್ಣದ ಟೋಪಿ ಧರಿಸಿ ಕಾರ್ಯ ನಿರ್ವಹಿಸುತ್ತಿದ್ದರು. ಇದನ್ನು ಪ್ರಶ್ನಿಸಿದ ಮಹಿಳೆಯೊಬ್ಬರು ಬಲವಂತವಾಗಿ ಟೋಪಿ ತೆಗೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ನೆಟ್ಟಿಗರಿಂದ ಹಲವು ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಸರ್ಕಾರಿ ಸೇವೆಯಲ್ಲಿರುವಾಗ ಸರ್ಕಾರವೇ ಸಮವಸ್ತ್ರ ನೀಡುತ್ತದೆ, ಅದರಲ್ಲಿ ಈ ಹಸಿರು ಟೋಪಿ ಕೂಡ ಭಾಗವಾಗಿದೆಯೇ ಎಂದು ಮಹಿಳೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಕಂಡಕ್ಟರ್‌ ನಯವಾಗಿಯೇ ಉತ್ತರಿಸಿದ್ದಾರೆ. ಕೊನೆಗೆ ಟೋಪಿ ತೆಗೆದು ನನಗೆ ಏನೂ ಸಮಸ್ಯೆ ಇಲ್ಲ ಬಿಡಿ.. ಎಂದು ಕಂಡಕ್ಟರ್‌ ಹೇಳಿರುವುದು ವೀಡಿಯೊದಲ್ಲಿ ದಾಖಲಾಗಿದೆ. 

''ಕಂಡಕ್ಟರ್‌ ಅವರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಡಿ ಮಾನ ಹರಾಜು ಮಾಡಿದ ಈ ಮಹಿಳೆಯ ವಿರುದ್ಧ BMTC ಪೋಲೀಸ್ ದೂರು ಧಾಖಲಿಸಬೇಕು'' ಎಂದು ನೆಟ್ಟಿಗರೊಬ್ಬರು ಒತ್ತಾಯಿಸಿದ್ದಾರೆ. 

''ಈ ಕಂಡಕ್ಟರ್ ನ ಸಂಯಮಕ್ಕೆ ಬೆರಗಾದೆ. ಈ ಮಹಿಳೆ ಯಾವ ನಿಯಮದ ಬಗ್ಗೆ ಮಾತನಾಡುತ್ತಿದ್ದಾರೆ? ಇದು ನೈತಿಕ ಪೊಲೀಸ್‌ಗಿರಿ'' ಎಂದು ಬಿಎಂಟಿಸಿ ಹಾಗೂ ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. 

''ಎಲ್ಲಾ ಮಹಿಳೆಯರು ಶಕ್ತಿ ಯೋಜನೆಯ ಉಪಯೋಗ ಪಡೆದುಕೊಳ್ಳಿ, ಕೆಲಸದಲ್ಲಿ ನಿರತರಾಗಿರುವ ಉದ್ಯೋಗಿಗಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ. ಇದು ಅನಗತ್ಯ ಮತ್ತು ಇದು ಅನೈತಿಕ ಪೋಲೀಸ್ ಗಿರಿಯಾಗಿದೆ. ಈ ಬಗ್ಗೆ ಸಾರಿಗೆ ಸಚಿವರ ಗಮನಕ್ಕೆ ತಂದಿದ್ದೇವೆ'' ಎಂದು ಕಾಂಗ್ರೆಸ್ ನಾಯಕಿ ಲಾವಣ್ಯ ಬಲ್ಲಾಳ್ ಪ್ರತಿಕ್ರಿಯಿಸಿದ್ದಾರೆ. 

ಇನ್ನೂ ಕೆಲವರು ಟೋಪಿ ತೆಗೆಸಿದ ಮಹಿಳೆ ಕಂಡಕ್ಟರ್ ಬಳಿ ಕಾನೂನು ಪಾಲನೆ ಮಾಡಲು ಹೇಳಿದ್ದಾರೆ ಅಷ್ಟೇ ಎಂದು ಪ್ರತಿಕ್ರಿಯಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News